ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಾಡೆಲಿಂಗ್ ಲೋಕದಿಂದ ಹಲವಾರು ನಟ, ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಸಾಲಿಗೆ ಸೇರುವ ನಟಿ ದೀಪ್ತಿ ಮೋಹನ್. 2010ರಲ್ಲಿ ಮಿಸ್ ಸ್ಯಾಂಡಲ್‌ವುಡ್ ಕಿರೀಟ ಮುಡಿಗೇರಿಸಿಕೊಂಡ ದೀಪ್ತಿ, ಕನ್ನಡದ ‘ಮೈಥಿಲಿ’, ‘ಗ್‌ಟಿ ಬಾಕ್ಸ್’, ತಮಿಳಿನ ‘ನಾರದನ್’ ಸೇರಿ ಕೆಲವು ಚಿತ್ರಗಳಲ್ಲಿ ಮಿಂಚಿದ್ದಾರೆ. ಅಪ್ಪ, ಅಮ್ಮ ಇಬ್ಬರೂ ಆಕಾಶದ ತಾರೆಗಳ ಹುಡುಕುವ ಇಸ್ರೋ ಸಿಬ್ಬಂದಿ. ಮಗಳು ಸಿನಿಮಾ ತಾರೆಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಕೊಲ್ಕತ್ತ, ಮುಂಬೈ, ಚಂಡೀಘಡ, ಹೈದರಾಬಾದ್ ಸೇರಿ ದೇಶಾದ್ಯಂತ ಹಲವೆಡೆ ಮಾಡೆಲಿಂಗ್, ಹಲವಾರು ಡಿಸೈನರ್‌ಗಳು, ಬ್ರ್ಯಾಂಡ್‌ಗಳಿಗೆ ರ‌್ಯಾಂಪ್ ವಾಕ್ ಮಾಡಿರುವ ದೀಪ್ತಿ, ಇದೀಗ ತಮ್ಮದೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ.
ಸೌಂದರ್ಯಕ್ಕೆ ಗಡಿಯಿಲ್ಲ, ಇತಿ-ಮಿತಿಯಿಲ್ಲ…
ನಟಿ ದೀಪ್ತಿ ಮೋಹನ್ ತಮ್ಮದೇ ರೀತಿಯಲ್ಲಿ ಎಲ್‌ಜಿಬಿಟಿ (ಸಲಿಂಗಿ, ಉಭಯ ಲಿಂಗಿ ಹಾಗೂ ತೃತೀಯ ಲಿಂಗಿಗಳು) ಮಾಡೆಲ್‌ಗಳಿಗೆ ಹೊಸ ವೇದಿಕೆ ನೀಡುತ್ತಿದ್ದಾರೆ. ‘ಕರೋನಾ ಸಮಯದಲ್ಲಿ ಸುಮ್ಮನೇ ಕುಳಿತು ಯೋಚಿಸುವಾಗ ನನ್ನದೇ ನಿರ್ಮಾಣ ಸಂಸ್ಥೆ ಯಾಕೆ ಪ್ರಾರಂಭಿಸಬಾರದು ಅಂತನ್ನಿಸಿತು. ಆ ಬಳಿಕ ಔರಾ ಪ್ರೊಡಕ್ಷನ್ಸ್ ಪ್ರಾರಂಭಿಸಿದೆ. ನಾವು ಎಲ್‌ಜಿಬಿಟಿ ್ರೆಂಡ್ಲಿ. ಸೌಂದರ್ಯ ಅಂದರೆ ಒಬ್ಬ ಹುಡುಗಿ ಹೀಗೇ ಇರಬೇಕು, ಇಷ್ಟೇ ದಪ್ಪ ಇರಬೇಕು, ಇದೇ ಬಣ್ಣ ಇರಬೇಕು ಅಂತಲ್ಲ. ಸೌಂದರ್ಯ ಎಲ್ಲ ಶೇಪ್, ಸೈಜ್, ಬಣ್ಣ, ಲಿಂಗಗಳಲ್ಲೂ ಇರುತ್ತದೆ ಎಂಬುದನ್ನು ಬರೀ ಹೇಳದೇ, ಅದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತಿದ್ದೇನೆ. ಎಲ್‌ಜಿಬಿಟಿ ಮಾಡೆಲ್‌ಗಳ ಜತೆ ದೆಹಲಿ, ಮುಂಬೈ, ಕೊಚ್ಚಿ ಸೇರಿ ಹಲವೆಡೆ ಶೋಗಳನ್ನು ನೀಡಿದ್ದೇನೆ. ಕಾರ್ಯಕ್ರಮಗಳನ್ನು ನಿರ್ದೇಶಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ನಟಿ ದೀಪ್ತಿ.
ಇದನ್ನೂ ಓದಿ : ಒಟಿಟಿಯಲ್ಲೂ ಟ್ರೆಂಡ್ ಆಯ್ತು ರಜನಿಕಾಂತ್ ನಟನೆಯ ‘ಜೈಲರ್’!
ಸಿನಿಮಾ ನಿರ್ದೇಶನಕ್ಕೆ ಸಿದ್ಧತೆ
ಔರಾ ಪ್ರೊಡಕ್ಷನ್ಸ್‌ನಿಂದ ಹಲವು ಜಾಹೀರಾತು, ಫ್ಯಾಷನ್ ಕಾರ್ಯಕ್ರಮಗಳನ್ನು ನಿರ್ದೇಶಿಸಿ, ಸಿನಿಮಾಗಳಲ್ಲಿ ನಟಿಸಿ ಅನುಭವ ಪಡೆದಿರುವ ದೀಪ್ತಿ ಚಿತ್ರ ನಿರ್ದೇಶನಕ್ಕೂ ರೆಡಿಯಾಗಿದ್ದಾರಂತೆ. ‘ಈಗ ತಾಂತ್ರಿಕವಾಗಿ ಸಾಕಷ್ಟು ಕಲಿತಿದ್ದೇನೆ. ಒಂದೊಳ್ಳೆ ಕಥೆ ಸಿಕ್ಕರೆ ಮುಂದೆ ಸಿನಿಮಾ ನಿರ್ದೇಶಿಸುವ ಪ್ಲ್ಯಾನ್ ಕೂಡ ಇದೆ’ ಎನ್ನುತ್ತಾರೆ.