ಲಾಕ್ಡೌನ್ ಪ್ರಾರಂಭವಾಗಿ ಕೆಲವು ತಿಂಗಳುಗಳ ಕಾಲ ನಟಿ ಸಮಂತಾ ಅಕ್ಕಿನೇನಿ ಸುದ್ದಿಯೇ ಇರಲಿಲ್ಲ. ಒಂದು ಹಂತದಲ್ಲಿ ಅವರ ಅಭಿಮಾನಿಗಳೇ ಸೋಷಿಯಲ್ ಮೀಡಿಯಾಗೆ ಬಂದು, 'ಎಲ್ಲಿ ಮಾಯವಾಗಿದ್ಯಮ್ಮಾ?' ಎಂದು ಕೇಳುವವರೆಗೂ ಸಮಂತಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಹಾಗೊಮ್ಮೆ ಬಂದಿದ್ದೇ ಬಂದಿದ್ದು, ಆ ನಂತರ ಸಮಂತಾ ಎರಡ್ಮೂರು ದಿನಗಳಿಗಾದರೂ ಒಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಸಮಂತಾ ಫೋಟೋಗಳು ಮತ್ತು ವಿಡಿಯೋ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಾರಿ ಅವರ ಜತೆಗೆ ಮಾವ ನಾಗಾರ್ಜುನ ಸಹ ಇದ್ದರು ಎಂಬುದು ವಿಶೇಷ.
ಮಾವ-ಸೊಸೆ ಸೇರಿ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಬರುವುದು ಸಹಜ. ಗ್ರೀನ್ ಇಂಡಿಯಾ ಸವಾಲನ್ನು ಒಪ್ಪಿರುವ ಈ ಮಾವ-ಸೊಸೆ, ತಮ್ಮ ಮನೆಯ ಹಿತ್ತಲಿನಲ್ಲಿ ಮೂರು ಗಿಡಗಳನ್ನು ನೆಟ್ಟಿದ್ದಾರೆ. ಈ ಗಿಡ ನೆಡುವ ಪ್ರೋಗ್ರಾಮ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬರೀ ಸಮಂತಾ ಮಾತ್ರ ಅಲ್ಲ, ಇತ್ತೀಚೆಗೆ ನಟ ಪ್ರಭಾಸ್ ಸಹ ಈ ಗ್ರೀನ್ ಇಂಡಿಯಾ ಸವಾಲನ್ನು ಸ್ವೀಕರಿಸಿದ್ದು, ತಮ್ಮ ಮನೆಯ ಹಿಂದೆ ಮೂರು ಗಿಡಗಳನ್ನು ನೆಟ್ಟಿದ್ದಾರೆ. ಅದಾಗಿ ಮೂರೇ ದಿನಕ್ಕೆ ಸಮಂತಾ ಸಹ ತಮ್ಮ ಮನೆಯ ಹಿತ್ತಲಿನಲ್ಲಿ ಮಾವನ ಜತೆಗೆ ಸೇರಿ ಗಿಡ ನೆಟ್ಟಿದ್ದಾರೆ.
ಬರೀ ಗಿಡ ನೆಡುವುದಷ್ಟೇ ಅಲ್ಲ, ಅದರ ಜತೆಗೆ ಮೂರು ಜನರನ್ನು ನಾಮಿನೇಟ್ ಸಹ ಮಾಡಬೇಕು. ಸಮಂತಾ ಸಹ ಮೂವರನ್ನು ನಾಮಿನೇಟ್ ಮಾಡಿದ್ದಾರೆ. ಆ ಮೂವರು ಯಾರು ಗೊತ್ತಾ? ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ ಮತ್ತು ಸೆಲೆಬ್ರಿಟಿ ಡಿಸೈನರ್ ಶಿಲ್ಪಾ ರೆಡ್ಡಿ ಅವರನ್ನು ಸಮಂತಾ ನಾಮಿನೇಟ್ ಮಾಡಿದ್ದಾರೆ.
ಅಲ್ಲಿಗೆ ಸದ್ಯದಲ್ಲೇ ರಶ್ಮಿಕಾ ಮಂದಣ್ಣ ಸಹ ತಮ್ಮ ಮೆನಯ ಹಿತ್ತಲಿನಲ್ಲಿ ಗಿಡ ನೆಡುವ ಪ್ರೋಗ್ರಾಂ ಇಟ್ಟುಕೊಂಡರೆ ಅದರಲ್ಲಿ ಆಶ್ಚರ್ಯವೇನಿಲ್ಲ.