ಸಿನಿವಾಣಿ

ನನ್ನ ಎಲ್ಲ ಮಕ್ಕಳೂ ಇದೇ ವೃತ್ತಿಯಲ್ಲಿ ಮುಂದುವರೆಯಲಿ: ಸೈಫ್​

ಮುಂಬೈ: ಬಾಲಿವುಡ್​ನಲ್ಲಿ ನೆಪೋಟಿಸಂ ಹೆಚ್ಚುತ್ತಿದೆ, ಇಲ್ಲಿ ಹೊಸಬರು ಹೊರಗಿನಿಂದ ಬಂದು ಬದುಕುವುದು ಬಹಳ ಕಷ್ಟವಾಗುತ್ತಿದೆ ಎಂಬ ಕೂಗು ಒಂದೆಡೆ ಕೇಳಿ ಬರುತ್ತಿದ್ದರೆ, ಇನ್ನೊಂದು ಕಡೆ ನಟ ಸೈಫ್​ ಅಲಿ ಖಾನ್​, ತಮ್ಮ ಎಲ್ಲಾ ಮಕ್ಕಳೂ ಇದೇ ವೃತ್ತಿಯಲ್ಲಿ ಮುಂದುವರೆಯಲಿ ಎಂದು ಹೇಳಿದ್ದಾರೆ.

ಈಗ್ಯಾಕೆ ಈ ವಿಷಯ ಎಂದರೆ, ಈಗಾಗಲೇ ಸೈಫ್​ ಮಗಳು ಸಾರಾ ನಟಿಯಾಗಿದ್ದಾಗಿದೆ. ಈಗ ಅವರ ಮಗ ಇಬ್ರಾಹಿಂ ಸಹ ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾನೆ ಎಂಬ ಸುದ್ದಿಯೊಂದು ಬಾಲಿವುಡ್​​ನಲ್ಲಿ ಕೇಳಿಬರುತ್ತಿದೆ.

ಈ ಕುರಿತು ಮಾತನಾಡಿರುವ ಅವರು, 'ಇಬ್ರಾಹಿಂ ನಟನಾಗುವುದಕ್ಕೆ ತಯಾರಿ ನಡೆಸುತ್ತಿದ್ದಾನೆ. ಯಾಕಾಗಬಾರದು? ನನ್ನ ಎಲ್ಲ ಮಕ್ಕಳೂ ಇದೇ ವೃತ್ತಿಯಲ್ಲಿ ಮುಂದುವರೆಯಲಿ ಎಂಬುದು ನನ್ನ ಆಸೆ. ಏಕೆಂದರೆ, ಈ ವೃತ್ತಿಯೇ ಅದ್ಭುತ. ನಾನು 18ನೇ ವಯಸ್ಸಿನವನಾಗಿದ್ದಾಗ ನನ್ನ ಜೀವನ ಸಾಕಷ್ಟು ಹಾಳಾಗಿತ್ತು. ಬಹುಶಃ ನಾನು ನಟನಾಗದಿದ್ದರೆ ನನ್ನ ಜೀವನ ನಾಶವಾಗಿರುತ್ತಿತ್ತು. ಈ ಕ್ಷೇತ್ರಕ್ಕೆ ಬಂದಿದ್ದರಿಂದ ನನಗೊಂದು ಗುರುತೂ ಸಿಕ್ಕಿತು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತೃಪ್ತಿಯೂ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

ತನ್ನ ಮಗ ತನಗಿಂತ ಬಹಳ ಚೆನ್ನಾಗಿದ್ದಾನೆ ಎಂದು ಹೇಳಿರುವ ಸೈಫ್​, 'ನನ್ನ ಎಲ್ಲಾ ಮಕ್ಕಳಿಗೂ ನಟನೆಯ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ. ಅದು ಸಹಜ. ಏಕೆಂದರೆ, ನಮ್ಮದು ಕಲಾವಿದರ ಕುಟುಂಬ. ಬಹಳಷ್ಟು ಜನ ಚಿತ್ರರಂಗದಲ್ಲಿದ್ದೇವೆ. ಹಾಗಾಗಿ ಮಗನಿಗೂ ಇಲ್ಲೇ ಮುಂದುವರೆಯಬೇಕು ಎಂಬ ಆಸೆ ಇದ್ದರೆ ಸಹಜ. ಮೊದಲು ಅವನ ಓದು ಮುಗಿಯಲಿ. ಆ ನಂತರ, ಅವನಿಗೆ ಏನು ಬೇಕೋ ಅದು ಮಾಡಲಿ. ನಮ್ಮ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ' ಎಂದು ಅವರು ಹೇಳಿದ್ದಾರೆ.

ಇನ್ನು ತಾನು ಮಗನನ್ನು ಪರಿಚಯಿಸುತ್ತೀನೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದಿರುವ ಸೈಫ್​, 'ಅವನನ್ನು ಚಿತ್ರರಂಗಕ್ಕೆ ನಾನು ಪರಿಚಯಿಸುತ್ತೀನೋ ಅಥವಾ ಬೇರೆಯವರು ಪರಿಚಯಿಸುತ್ತಾರೋ ಎಂಬುದು ಗೊತ್ತಿಲ್ಲ. ಆ ಆಯ್ಕೆ ನಂತರ. ಮೊದಲು ಅವನ ಓದು ಮುಗಿಯಲಿ. ನಾನು ನೋಡಿರುವಂತೆ ಅವನಿಗೆ ಚಿತ್ರರಂಗ ಮತ್ತು ಅದರಲ್ಲೂ ನಟನೆಯಲ್ಲಿ ಬಹಳ ಆಸಕ್ತಿ. ಹಾಗಾಗಿ ಅವನು ಬೇರೆ ಕೆಲಸ ಮಾಡುವುದು ಸಂಶಯವೇ' ಎನ್ನುತ್ತಾರೆ ಸೈಫ್​.