ಬೆಂಗಳೂರು: ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಸಾಕಷ್ಟು ಸಮಸ್ಯೆ ಆಯಿತು, ನಮ್ಮ ಪಾಲಿಗೆ ಶಾಪವಾಯಿತು ಎಂದು ಹಲವರು ಬೇಸರದಿಂದ ಮಾತನಾಡುವುದನ್ನು ಕೇಳಿರಬಹುದು, ನೋಡಿರಬಹುದು. ಆದರೆ, ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರಿಗೆ ಮಾತ್ರ ಲಾಕ್ಡೌನ್ ವರವಾಯಿತಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.
'ಎಲ್ಲರೂ ಲಾಕ್ಡೌನ್ಗೆ ಬಯ್ಯುವುದನ್ನು ಕೇಳಿದ್ದೀನಿ. ನನಗೆ ಅದರಿಂದ ತುಂಬಾನೇ ಅನುಕೂಲವಾಯಿತು. ಏಕೆಂದರೆ, ನಾನು ಆ ಸಮಯವನ್ನು ಚೆನ್ನಾಗಿ ಬಳಸಿಕೊಂಡೆ. ಆ ಸಮಯದಲ್ಲಿ ಎಲ್ಲೂ ಹೊರಗೆ ಹೋಗುವ ಹಾಗಿರಲಿಲ್ಲ. ಯಾರದೇ ಸಂಪರ್ಕ ಸಹ ಇರಲಿಲ್ಲ. ಮನೆಯಲ್ಲೇ ಕೂತು ಚೆನ್ನಾಗಿ ಬರೆದೆ. ಈ ಸಮಯದಲ್ಲಿ ನಾಲ್ಕು ವಿಭಿನ್ನ ಕಥೆಗಳನ್ನು ಮಾಡಿಟ್ಟುಕೊಂಡಿದ್ದೇನೆ. ಎಲ್ಲವೂ ವಿಭಿನ್ನ ಜಾನರ್ಗೆ ಸೇರಿದ ಚಿತ್ರಗಳು' ಎನ್ನುತ್ತಾರೆ ಅವರು.
ಅಂದಹಾಗೆ, ಈ ನಾಲ್ಕರಲ್ಲಿ ಈಗಾಗಲೇ ಅವರು ಒಂದು ಚಿತ್ರವನ್ನು ಈಗಾಗಲೇ ಶುರು ಮಾಡಿದ್ದಾರೆ. ಆದಿತ್ಯ ಮತ್ತು ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ಈಗಾಗಲೇ ಶುರುವಾಗಿದೆ. ಇತ್ತೀಚೆಗೆ ದರ್ಶನ್ ಸಹ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಸ್ತದ ಒಳಗೆ ಡಿ ಎಂಬ ಇಂಗ್ಲೀಷ್ ಅಕ್ಷರ ಇರುವುದನ್ನು ನೋಡಿದರೆ, ಚಿತ್ರದ ಹೆಸರು '5ಡಿ' ಇರಬಹುದು ಎಂದನಿಸುತ್ತದೆ. ಆದರೆ, ಚಿತ್ರದ ಶೀರ್ಷಿಕೆ ಏನು ಎಂದು ಎಲ್ಲೂ ಹೇಳುವುದಿಲ್ಲ ಎಂದು ಎಸ್. ನಾರಾಯಣ್ ಹೇಳುತ್ತಾರೆ.
'ಚಿತ್ರದ ಶೀರ್ಷಿಕೆ ಬಗ್ಗೆ ಈಗಲೇ ಏನನ್ನೂ ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಅದನ್ನು ಬೇಕಾದರೆ '5ಡಿ' ಅಂತ ಬೇಕಾದರೂ ಅಂದುಕೊಳ್ಳಬಹುದು ಅಥವಾ ಬೇರೆ ಏನಾದರೂ ಕರೆಯಬಹುದು. ಅದು ಅವರವರಿಗೆ ಬಿಟ್ಟಿದ್ದು. ಸದ್ಯಕ್ಕೆ ನಾವು ಪೋಸ್ಟರ್ ಬಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಒಂದೊಂದೇ ಮಾಹಿತಿ ಕೊಡುತ್ತೇನೆ. ಎಲ್ಲವನ್ನೂ ಒಂದೇ ಬಾರಿ ಹೇಳಿದರೆ ಏನೂ ಸ್ವಾರಸ್ಯವಿರುವುದಿಲ್ಲ' ಎನ್ನುತ್ತಾರೆ ಅವರು.