Dulquer Salmaan : ಐಷಾರಾಮಿ ಕಾರು ತೆರಿಗೆ ವಂಚನೆಯ ವಿರುದ್ಧ ದೇಶಾದ್ಯಂತ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ಅಧಿಕಾರಿಗಳು ನಮ್ಖೋರ್ ಕಾರ್ಯಾಚರಣೆ ಆರಂಭಿಸಿದ್ದು, ಅದರ ಭಾಗವಾಗಿ ಕೇರಳದಲ್ಲಿ ನಟರಾದ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮನೆ ಮೇಲೆ ಮಂಗಳವಾರ (ಸೆ. 23) ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ತೆರಿಗೆ ವಂಚನೆ ನಡೆದಿರುವ ರಾಜ್ಯಗಳಲ್ಲಿ ಕೇರಳವೇ ಅತಿ ಹೆಚ್ಚು ಎಂಬ ವರದಿ ಇದೆ.
ತಿರುವನಂತಪುರಂ, ಎರ್ನಾಕುಲಂ, ಕೊಟ್ಟಾಯಂ, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಾದ್ಯಂತ 30 ಸ್ಥಳಗಳಲ್ಲಿ ಅಧಿಕಾರಿಗಳಿಂದ ಉನ್ನತ ಮಟ್ಟದ ತಪಾಸಣೆ ನಡೆಯುತ್ತಿದೆ. ತನಿಖೆಯಲ್ಲಿ ಕೆಲವು ಪ್ರಮುಖ ಹೆಸರುಗಳು ಕೇಳಿಬಂದಿದ್ದು, ನಟ ದುಲ್ಕರ್ ಸಲ್ಮಾನ್ ಕೂಡ ಸೇರಿದ್ದಾರೆ. ಹೀಗಾಗಿ ದುಲ್ಕರ್ ಅವರ ನಿವಾಸಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಅಂದಹಾಗೆ, ದುಲ್ಕರ್ ಸಲ್ಮಾನ್ ಅವರಿಗೆ ಕಾರುಗಳ ಮೇಲಿರುವ ವ್ಯಾಮೋಹ ಹೊಸದೇನಲ್ಲ. ಬಹಳ ಹಿಂದಿನಿಂದಲೇ ಕಾರುಗಳೆಂದರೆ ಕ್ರೇಜ್ ಇದೆ. ಅವರ ಬಳಿ ಐಷಾರಾಮಿ ಕಾರುಗಳ ಕಲೆಕ್ಷನ್ ಕೂಡ ಇವೆ. ಕಾರುಗಳಿಗಾಗಿಯೇ ಒಂದು ಖಾಸಗಿ ಗ್ಯಾರೇಜ್ ಅನ್ನು ನಿರ್ಮಿಸಿದ್ದಾರೆ. ಅವರ ಐಷಾರಾಮಿ ಕಾರು ಸಂಗ್ರಹದ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ.
ರೊಸ್ಸೊ ರುಬಿನೊ ಫೆರಾರಿ 296 GTB, ದುಲ್ಕರ್ ಅವರ ಗ್ಯಾರೇಜ್‌ನಲ್ಲಿರುವ ಮೊದಲ ಹೈಬ್ರಿಡ್ ಫೆರಾರಿ ಕಾರಾಗಿದೆ. ಭಾರತದಲ್ಲಿ ಇದರ ಬೆಲೆ ಸುಮಾರು 5.88 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತದೆ. ದುಲ್ಕರ್ ತಮ್ಮ ರೊಸ್ಸೊ ರುಬಿನೊ ಮೆಟಾಲಿಝಾಟೊ ಕಾರಿನೊಂದಿಗೆ ಚೆನ್ನೈನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಈ ಕಾರು ದುಲ್ಕರ್ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು.
ಪೋರ್ಷೆ 911 GT3 ಕಾರು ದುಲ್ಕರ್ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ದುಲ್ಕರ್ ಒಮ್ಮೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕಾರನ್ನು "ನನ್ನ ಶೆಡ್‌ನಲ್ಲಿರುವ ಅತ್ಯಂತ ತೀಕ್ಷ್ಣವಾದ ಸಾಧನ, ಅತ್ಯಂತ ಕಚ್ಚಾ ಮತ್ತು ಆಕರ್ಷಕ ಚಾಲನೆಯ ಅನುಭವ" ಎಂದು ಬಣ್ಣಿಸಿದ್ದರು. ಇದರ ಬೆಲೆ 2.3 ಕೋಟಿ ರೂ.ಗಳಿಂದ ಪ್ರಾರಂಭವಾಗಿ 3 ಕೋಟಿ ರೂ.ಗಳಿಗಿಂತ ಹೆಚ್ಚಿದೆ.
ತನ್ನ ರೋರಿಂಗ್ V8 ಹೊಂದಿರುವ ಐಕಾನಿಕ್ ಗುಲ್ವಿಂಗ್ SLS AMG ಎಂಟು ವರ್ಷಗಳಿಗೂ ಹೆಚ್ಚು ಕಾಲ ದುಲ್ಕರ್ ಜೊತೆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಕಾರಿನ ಫೋಟೋ ಹಂಚಿಕೊಂಡ ದುಲ್ಕರ್, ಇದನ್ನು "ಭವಿಷ್ಯದ ಕ್ಲಾಸಿಕ್" ಎಂದು ಕರೆದರು ಮತ್ತು ಅಂತಹ ದಂತಕಥೆಯ ಮಾಲೀಕನಾಗಿರುವುದು ಒಂದು ಸೌಭಾಗ್ಯ ಎಂದು ಹೇಳಿದ್ದಾರೆ. ಇದರ ಬೆಲೆ 2.54 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತದೆ.
ಕಾರು ಉತ್ಸಾಹಿಗಳಲ್ಲಿ, ಮ್ಯಾನುವಲ್ BMW M3 E46 ಅನ್ನು BMW ನಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ಮಾತನ್ನು ದುಲ್ಕರ್ ಕೂಡ ಒಪ್ಪುತ್ತಾರೆ. ಈ ಕಾರನ್ನು ತಮ್ಮ ಸಂಗ್ರಹದ "ಕಿರೀಟದ ರತ್ನ" ಎಂದು ಕರೆಯುತ್ತಾರೆ. ಅದರ ಚಾಲನೆಯ ಅನುಭವವನ್ನು ಸಂಭ್ರಮಿಸುವ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ದುಲ್ಕರ್ ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಈ ಕಾರಿನ ಬೆಲೆ ಸುಮಾರು 50 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ.
ಅಂದಹಾಗೆ, ದುಲ್ಕರ್ ಕಾರುಗಳ ಸಂಖ್ಯೆ ಅಲ್ಲಿಗೆ ನಿಲ್ಲುವುದಿಲ್ಲ. ಅವರ ಬಳಿ ಪೋರ್ಷೆ ಪನಾಮೆರಾ, ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600, ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್, ಮರ್ಸಿಡಿಸ್-ಎಎಂಜಿ ಜಿ63, ಮರ್ಸಿಡಿಸ್-ಎಎಂಜಿ ಎ45, ಬಿಎಂಡಬ್ಲ್ಯು 7 ಸೀರೀಸ್, ಲ್ಯಾಂಡ್ ರೋವರ್ ರೇಂಜ್ ರೋವರ್, ಲ್ಯಾಂಡ್ ರೋವರ್ ಡಿಫೆಂಡರ್, ವಿಡಬ್ಲ್ಯೂ ಪೊಲೊ ಜಿಟಿಐ, ಮಿನಿ ಕೂಪರ್ ಎಸ್, ಮಜ್ದಾ ಎಂಎಕ್ಸ್-5 ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾ ಕೂಡ ಇದೆ ಎಂದು ವರದಿಯಾಗಿದೆ. (ಏಜೆನ್ಸೀಸ್)