ಮುಂಬೈ: ಕೆಲವು ತಿಂಗಳುಗಳ ಹಿಂದೆ ನಿಧನರಾದ ಬಾಲಿವುಡ್ ನಟ ರಿಷಿ ಕಪೂರ್ ಅವರು ಲಾಕ್ಡೌನ್ಗೂ ಮುನ್ನ ಒಂದಿಷ್ಟು ಕಥೆಗಳನ್ನು ಕೇಳಿದ್ದರು. ಒಂದಿಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಉತ್ಸುಕರಾಗಿದ್ದರು. ಆದರೆ, ಅವರ ನಿಧನದಿಂದಾಗಿ ಆ ಎಲ್ಲಾ ಚಿತ್ರಗಳು ಇದೀಗ ನಿಂತು ಹೋಗಿವೆ.
ಈ ಪೈಕಿ ಒಂದು ಚಿತ್ರದಲ್ಲಿ ರಿಷಿ ಅಷ್ಟೇ ಅಲ್ಲ, ಅವರ ಮಗ ರಣಬೀರ್ ಕಪೂರ್ ಸಹ ನಟಿಸಬೇಕಿತ್ತಂತೆ. ರಿಷಿ ಮತ್ತು ರಣಬೀರ್ ಜತೆಯಾಗಿ ನಟಿಸಬೇಕು ಎಂದು ಅವರಿಬ್ಬರ ಅಭಿಮಾನಿಗಳ ಹಲವು ವರ್ಷಗಳ ಆಸೆ.
ಈ ಹಿಂದೆ ಅವರಿಬ್ಬರೂ 'ಬೇಷರಮ್' ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಿದರೂ, ಚಿತ್ರ ಯಶಸ್ವಿಯಾಗಲಿಲ್ಲ. ಆ ನಂತರ ಇಬ್ಬರೂ ಒಂದೊಳ್ಳೆಯ ಚಿತ್ರದಲ್ಲಿ ಜತೆಯಾಗಿ ನಟಿಸಬೇಕು ಎಂದು ಕಾಯುತ್ತಿದ್ದರು.
ಅಂಥದ್ದೊಂದು ಸಂದರ್ಭ ಈ ವರ್ಷದಲ್ಲಿ ಬಂದಿತ್ತಂತೆ. ಕಳೆದ ವರ್ಷ ಬಿಡುಗಡೆಯಾದ ಗುಜರಾತಿಯ ಸೂಪರ್ ಹಿಟ್ ಚಿತ್ರ 'ಚಾಲ್ ಜೀವಿ ಲಾಯೆ' ಎಂಬ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಬೇಕು ಎಂದು ಕೋಕೋನಟ್ ಮೋಷನ್ ಪಿಕ್ಚರ್ಸ್ನವರು ಪ್ರಯತ್ನ ನಡೆಸಿದ್ದರಂತೆ.
ಈ ಚಿತ್ರದಲ್ಲಿ ರಿಷಿ ಕಪೂರ್ ಅವರು ನಟಿಸಿದರೆ ಚೆನ್ನ ಎಂದು ಅವರನ್ನು ಸಂಪರ್ಕಿಸಿದ್ದರಂತೆ. ಚಿತ್ರ ನೋಡಿ ಖುಷಿಪಟ್ಟಿದ್ದ ರಿಷಿ, ಈ ಚಿತ್ರದಲ್ಲಿ ತಮ್ಮ ಮಗನಿಗೂ ನಟಿಸುವುದಕ್ಕೆ ಹೇಳುವುದಾಗಿ ಹೇಳಿದ್ದರಂತೆ.
ಇದೆಲ್ಲಾ ಆಗಿದ್ದು, ಈ ವರ್ಷದ ಮಾರ್ಚ್ನಲ್ಲಿ. ಇನ್ನೇನು ಮಾತುಕತೆ ಮುಂದುವರೆಯಬೇಕು ಎನ್ನುವಷ್ಟರಲ್ಲಿ ಲಾಕ್ಡೌನ್ ಆಗಿದೆ. ಅದಾಗಿ ಎರಡು ತಿಂಗಳಲ್ಲಿ ರಿಷಿ ಕಪೂರ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೀಗಾಗಿ ಈ ಚಿತ್ರ ಶುರುವಾಗುವುದಕ್ಕೆ ಮುಂಚೆಯೇ ನಿಂತು ಹೋಗಿದೆ.
ಅಂದಹಾಗೆ, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರದಲ್ಲೂ ರಿಷಿ ಕಪೂರ್ ಮತ್ತು ರಣಬೀರ್ ಕಪೂರ್ ಇಬ್ಬರೂ ಅಪ್ಪ-ಮಗನಾಗಿಯೇ ಕಾಣಿಸಿಕೊಳ್ಳಬೇಕಿತ್ತು. ಮುಂದೊಮ್ಮೆ ಈ ಚಿತ್ರ ಬಿಡುಗಡೆಯಾದರೂ ಅದರಲ್ಲಿ ರಿಷಿ ಕಪೂರ್ ಇರುವುದಿಲ್ಲ ಎನ್ನುವುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ.