ಮುಂಬೈ: ರಿಯಾ ಚಕ್ರವರ್ತಿ ಅವರ 14 ದಿನಗಳ ನ್ಯಾಯಾಂಗ ಬಂಧನ ಇಂದಿಗೆ ಅಂತ್ಯವಾಗಬೇಕಿತ್ತು. ಆದರೆ, ಮುಂಬೈ ಹೈಕೋರ್ಟ್ ಅವರ ಜಾಮೀನು ಅರ್ಜಾ ವಜಾ ಮಾಡಿದ ಹಿನ್ನೆಲೆಯಲ್ಲಿ ರಿಯಾದ ಅವರ ಬಂಧನ ಅಕ್ಟೋಬರ್ 06ರವರೆಗೂ ಮುಂದುವರೆದಿದೆ.
ಇದಕ್ಕೂ ಮುನ್ನ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ಬಳಕೆಯಾಗಿದೆ ಎಂಬ ವಿಷಯದಲ್ಲಿ ತನಿಖೆ ನಡೆಸುತ್ತಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು, ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಅವರನ್ನು ಕೆಲವು ದಿನಗಳ ಹಿಂದೆ ಬಂಧಿಸಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ತಮಗೆ ಜಾಮೀನು ಸಿಗಬೇಕು ಎಂದು ರಿಯಾ ಅರ್ಜಿ ಸಲ್ಲಿಸಿದ್ದು, ಆ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ ನಡೆಯಿತು. ಈ ಪ್ರಕರಣದಲ್ಲಿ ರಿಯಾ ಅವರನ್ನು ಹೊರಗೆ ಬಿಟ್ಟರೆ, ಪ್ರಮುಖವಾದ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ವಕೀಲರು ಮನವಿ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ಹೈ ಕೋರ್ಟ್, ರಿಯಾ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿ, ಅವರನ್ನು ಅಕ್ಟೋಬರ್ 06ರವರೆಗೂ ನ್ಯಾಯಾಂಗ ಬಂಧನದಲ್ಲಿ ಮುಂದುವರೆಸಿದೆ.
ಡ್ರಗ್ಸ್ ವಿಚಾರದಲ್ಲಿ ರಿಯಾ ಅವರಿಂದ ಎನ್ಸಿಬಿ ಅಧಿಕಾರಿಗಳು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಬರೀ ಸುಶಾಂತ್ ಅಷ್ಟೇ ಅಲ್ಲ, ಬಾಲಿವುಡ್ನಲ್ಲಿ 25ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಅಭ್ಯಾಸವಿದೆ ಮತ್ತು ಪಾರ್ಟಿಗಳಲ್ಲಿ ಅವರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ರಿಯಾ ಹೇಳಿದ್ದು, ಈ ವಿಷಯವಾಗಿ ಅವರು ಹೇಳಿರುವ ನಟ-ನಟಿಯರ ಬಗ್ಗೆ ಮಾಹಿತಿ ಮತ್ತು ಸಾಕ್ಷ್ಯ ಸಂಗ್ರಹಿಸುವಲ್ಲಿ ಎನ್ಸಿಬಿ ಅಶಿಕಾರಿಗಳು ನಿರತರಾಗಿದ್ದಾರೆ.