ಕಾಲಚಕ್ರ ಹೇಗೆ ಒಂದು ಸುತ್ತು ಬರುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಕೆಲವು ವರ್ಷಗಳ ಹಿಂದೆ ಬಾಲಿವುಡ್ನಲ್ಲಿ ರಿಮೇಕ್ ಚಿತ್ರಗಳ ಹಾವಳಿ ವಿಪರೀತವಾಗಿತ್ತು. 80ರ ದಶಕದಲ್ಲಿ ಮೊದಲು ಜಿತೇಂದ್ರ ದೊಡ್ಡ ಮಟ್ಟದಲ್ಲಿ ದಕ್ಷಿಣದ ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದರು. ಆ ನಂತರ 90ರ ದಶಕದಲ್ಲಿ ಗೋವಿಂದ, ಅನಿಲ್ ಕಪೂರ್ ಮುಂತಾದವರು ದಕ್ಷಿಣದ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಪರಂಪರೆ ಮುಂದುವರಿಸಿದರು. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಅಜಯ್ ದೇವಗನ್ ಮುಂತಾದವರು ಈ ಪರಂಪರೆಗೆ ಇನ್ನಷ್ಟು ಕೊಡುಗೆ ನೀಡಿದರು. ಒಂದು ದಶಕದ ಹಿಂದೆ ಹಿಂದಿಯಲ್ಲಿ ಬಿಡಗುಡೆಯಾಗಿ ಸೂಪರ್ ಹಿಟ್ ಆದ ‘ವಾಂಟೆಡ್’, ‘ಘಜಿನಿ’, ‘ಭೂಲ್ ಭುಲಯ್ಯ’, ‘ತೇರೆ ನಾಮ್, ‘ಹಂಗಾಮ’, ‘ರೌಡಿ ರಾಥೋಡ್’, ‘ಬಾಡಿಗಾರ್ಡ್’, ‘ಸಿಂಗಮ್ ಮುಂತಾದ ಚಿತ್ರಗಳೆಲ್ಲವೂ ದಕ್ಷಿಣದ ರಿಮೇಕ್ಗಳೇ.
ಒಂದು ದಶಕದಿಂದ ಕಡಿಮೆ: ಕ್ರಮೇಣ ಈ ಪರಂಪರೆ ಸ್ವಲ್ಪ ತಗ್ಗಿತು. ದಕ್ಷಿಣದ ಚಿತ್ರಗಳ ಬದಲಾಗಿ ಬಾಲಿವುಡ್ನ ಕಣ್ಣು ಹಾಲಿವುಡ್ನ ಮತ್ತು ಬೇರೆಬೇರೆ ದೇಶಗಳ ಚಿತ್ರಗಳತ್ತ ನೆಟ್ಟಿತ್ತು. ಅಲ್ಲಿನ ವಿಭಿನ್ನ ಚಿತ್ರಗಳನ್ನು ಹಿಂದಿಯಲ್ಲಿ ರಿಮೇಕ್ ಮಾಡುವ ಪರಿಪಾಠ ಶುರುವಾಯಿತು. ಆ ನಂತರ ಬಯೋಪಿಕ್ಗಳು ಬಂದವು. ನೈಜ ಘಟನೆಗಳು ಚಿತ್ರಗಳಾದವು. ಇದರ ಮಧ್ಯೆಯೂ ದಕ್ಷಿಣದಿಂದ ಹಿಂದಿಗೆ ಚಿತ್ರಗಳು ರಿಮೇಕ್ ಆಗುತ್ತಲೇ ಇದ್ದವು. ಕಳೆದ ಒಂದು ದಶಕದಿಂದೀಚೆಗೆ ಈ ಸಂಖ್ಯೆ ಕಡಿಮೆಯಾದರೂ ದಕ್ಷಿಣದಿಂದ ಬಾಲಿವುಡ್ ಯಾವತ್ತೂ ಸಂಪೂರ್ಣವಾಗಿ ದೂರಾಗಲೇ ಇಲ್ಲ. ಈಗ ಚಕ್ರ ಒಂದು ಸುತ್ತು ಸುತ್ತಿಬಂದಿದ್ದು, ಮತ್ತೊಮ್ಮೆ ದಕ್ಷಿಣದ ಚಿತ್ರಗಳತ್ತ ಬಾಲಿವುಡ್ ದೃಷ್ಟಿ ನೆಟ್ಟಿದೆ.
ರಿಮೇಕ್ಗಳಲ್ಲಿ ಸ್ಟಾರ್ ನಟರು: ಸದ್ಯದ ಪರಿಸ್ಥಿತಿಯಲ್ಲಿ 20ಕ್ಕೂ ಹೆಚ್ಚು ಚಿತ್ರಗಳು ಹಿಂದಿಗೆ ರಿಮೇಕ್ ಆಗುತ್ತಿದ್ದು, ಈಗಾಗಲೇ ‘ಬಚ್ಚನ್ ಪಾಂಡೆ’, ‘ಜೆರ್ಸಿ’, ‘ಹಿಟ್’, ‘ಫಾರೆನ್ಸಿಕ್’, ‘ಗುಡ್ಲಕ್ ಜೆರ್ರಿ’, ‘ಕಟ್ಪುತ್ಲಿ’ ಬಿಡುಡೆಯಾಗಿವೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಸಂಖ್ಯೆಯ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿರುವುದು ವಿಶೇಷ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಹೃತಿಕ್ ರೋಶನ್, ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ಕಾರ್ತಿಕ್ ಆರ್ಯನ್, ಜಾನ್ ಅಬ್ರಹಾಂ ಮುಂತಾದವರು ಈ ರಿಮೇಕ್ಗಳಲ್ಲಿ ನಟಿಸುತ್ತಿದ್ದಾರೆ.
ಜನ ರಿಮೇಕ್ ನೋಡುತ್ತಾರಾ?: ಹಿಂದೊಮ್ಮೆ ರಿಮೇಕ್ ಆದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದ ಉದಾಹರಣೆಗಳಿವೆ. ಬದಲಾಗಿರುವ ಕಾಲಘಟ್ಟದಲ್ಲಿ ಆ ಯಶಸ್ಸು ಮರುಕಳಿಸುವುದಕ್ಕೆ ಸಾಧ್ಯವಾ? ಎಂಬ ಪ್ರಶ್ನೆ ಬಾಲಿವುಡ್ ಪಂಡಿತರನ್ನು ಕಾಡುತ್ತಿದೆ. ಅದಕ್ಕೆ ಕಾರಣವೂ ಇದೆ. ಹಿಂದೊಮ್ಮೆ ದಕ್ಷಿಣದ ಚಿತ್ರಗಳು ಹಿಂದಿ ಮಾತನಾಡುವ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಬಿಡುಗಡೆಯಾಗುತ್ತಿರಲಿಲ್ಲ, ಜನರಿಗೆ ನೋಡುವ ಅವಕಾಶ ಸಿಗುತ್ತಿರಲಿಲ್ಲ. ಹಾಗಾಗಿ, ಚಿತ್ರಗಳನ್ನು ರಿಮೇಕ್ ಮಾಡಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಇದು ಸ್ಯಾಟಿಲೈಟ್ ಮತ್ತು ಡಿಜಿಟಲ್ ಕಾಲ. ಟಿವಿಯಲ್ಲಿ ಮತ್ತು ಓಟಿಟಿಯಲ್ಲಿ ಬೇರೆಬೇರೆ ಭಾಷೆಗಳ ಚಿತ್ರಗಳು ಸಿಗುತ್ತಿವೆ. ಅದರಲ್ಲಿ ಎಷ್ಟೋ ಚಿತ್ರಗಳು ಹಿಂದಿಗೆ ಡಬ್ ಆಗಿವೆ. ಈಗ ರಿಮೇಕ್ ಆಗುತ್ತಿರುವ ಚಿತ್ರಗಳ ಪೈಕಿ ಎಷ್ಟೋ ಚಿತ್ರಗಳು ಓಟಿಟಿಯಲ್ಲಿ ಸಿಗುತ್ತಿವೆ. ಹಿಂದಿಯಲ್ಲಿಲ್ಲದಿದ್ದರೂ ಅದೇ ಭಾಷೆಯಲ್ಲಿ ಇಂಗ್ಲೀಷ್ ಸಬ್ಟೈಟಲ್ನೊಂದಿಗೆ ನೋಡಬಹುದಾಗಿದೆ. ಹೀಗಿರುವಾಗ ರಿಮೇಕ್ ಆದರೆ, ಜನ ಚಿತ್ರಮಂದಿರಕ್ಕೆ ಬಂದು ನೋಡುತ್ತಾರಾ ಎಂಬುದು ಮುಖ್ಯ ಪ್ರಶ್ನೆ.ಅದರಲ್ಲೂ ಲಾಕ್ಡೌನ್ ಸಮಯದಲ್ಲಿ ಮಲಯಾಳಂ ಚಿತ್ರಗಳು ಬರೀ ದಕ್ಷಿಣವಲ್ಲದೆ ಇಡೀ ದೇಶದಲ್ಲಿ ಸದ್ದು ಮಾಡಿದ್ದವು. ಅದಕ್ಕೆ ಕಾರಣ ಓಟಿಟಿ. ಇಂಥ ಕಾಲಘಟ್ಟದಲ್ಲಿ ರಿಮೇಕ್ ಮಾಡಿದರೆ, ಜನ ಚಿತ್ರಮಂದಿರಕ್ಕೆ ಬರುತ್ತಾರಾ? ಚಿತ್ರಗಳು ಗೆಲ್ಲುತ್ತವಾ? ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಅದಕ್ಕೆ ಸರಿಯಾಗಿ, ಈ ವರ್ಷ ಬಿಡುಗಡೆಯಾಗಿರುವ ಯಾವೊಂದು ಚಿತ್ರ ಸಹ ಗೆಲ್ಲಲಿಲ್ಲ. ‘ಬಚ್ಚನ್ ಪಾಂಡೆ’, ‘ಜೆರ್ಸಿ’ ಮುಂತಾದ ಚಿತ್ರಗಳು ಹೇಳಹೆಸರಿಲ್ಲದೆ ಮಾಯವಾಗಿವೆ. ಹಾಗಿರುವಾಗ, ಮುಂಬರುವ ಚಿತ್ರಗಳು ಗೆಲ್ಲುತ್ತವಾ? ಇದಕ್ಕೆ ಕಾಲವೇ ಉತ್ತರಿಸಬೇಕು.