ಕರೊನಾ ಮತ್ತು ಲಾಕ್ಡೌನ್ನಿಂದ ಸಿನಿಮಾ ಕಲಾವಿದರು ಮತ್ತು ತಂತ್ರಜ್ಱರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸವಿಲ್ಲದೆ, ಆರ್ಥಿಕ ಸಂಕಷ್ಟದಿಂದ ಬಸವಳಿದಿದ್ದಾರೆ. ಗುರುವಾರ ಆತ್ಮಹತ್ಯೆಗೆ ಶರಣಾದ ಕಲಾ ನಿರ್ದೇಶಕ ಲೋಕೇಶ್ ಸಾವಿಗೂ ಇದೇ ಆರ್ಥಿಕ ಸಂಕಷ್ಟ ಎಂದು ಹೇಳಲಾಗುತ್ತಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಲೋಕೇಶ್ ಗುರುತಿಸಿಕೊಂಡಿದ್ದರು. 'ಅವನೇ ಶ್ರೀಮನ್ನಾರಾಯಣ', 'ಬೆಲ್ ಬಾಟಮ್' ಮುಂತಾದ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದರಲ್ಲೂ, ಅವರನ್ನು 'ಬೆಲ್ ಬಾಟಮ್' ಲೋಕೇಶ್ ಅಂತಲೇ ಕನ್ನಡ ಚಿತ್ರರಂಗದಲ್ಲಿ ಕರೆಯಲಾಗುತಿತ್ತು. ಅಷ್ಟೇ ಅಲ್ಲ, 'ಬೆಲ್ ಬಾಟಮ್' ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ವೇದಿಕೆ ಕರೆದು ಗೌರವಿಸಲಾಗಿತ್ತು.
ಹೀಗೆ ಕೆಲವು ಚಿತ್ರಗಳಿಗೆ ಕೆಲಸ ಮಾಡಿ, ಹಲವು ಕನಸುಗಳನ್ನು ಕಂಡಿದ್ದ ಲೋಕೇಶ್ ಅವರಿಗೆ ಈ ಲಾಕ್ಡೌನ್ ತಂದಿಟ್ಟ ಸಮಸ್ಯೆ ಅಷ್ಟಿಷ್ಟಲ್ಲ. ಮೂಲತಃ ನಾಗಮಂಗಲದವರಾಗಿದ್ದ ಲೋಕೇಶ್, ಕೆಲಸದ ಕಾರಣ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ನಿಧಾನಕ್ಕೆ ವೃತ್ತಿಜೀವನ ರೂಪಿಸಿಕೊಳ್ಳುತ್ತಿದ್ದ ಲೋಕೇಶ್ ಅವರಿಗೆ ಕ್ರಮೇಣ ಒಂದೊಂದೇ ಚಿತ್ರದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಸಿಗುತಿತ್ತು.
ಇದನ್ನೂ ಓದಿ: ಡಬ್ಬಲ್ ಹ್ಯಾಟ್ರಿಕ್ ಬಾರಿಸಿದ ‘ಗೋಲ್ಡನ್ ಸ್ಟಾರ್’
ಜಯತೀರ್ಥ ನಿರ್ದೇಶನದ 'ಬೆಲ್ ಬಾಟಮ್ 2', 'ಬನಾರಸ್' ಸೇರಿದಂತೆ ಕೆಲವು ಚಿತ್ರಗಳಿಗೆ ಅವರು ಕೆಲಸ ಮಾಡಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್ಡೌನ್ನಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಲಾಯಿತು. ಹೀಗೆ ಚಿತ್ರೀಕರಣ ನಿಂತಿದ್ದರಿಂದ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅವರಿಗೆ ಕೆಲಸವಿರಲಿಲ್ಲ.
ಒಂದು ಕಡೆ ಕೆಲಸ ಇಲ್ಲ, ಇನ್ನೊಂದು ಕಡೆ ಆರ್ಥಿಕ ಸಂಕಷ್ಟ ... ಇದೆಲ್ಲದರಿಂದ ಬೇಸತ್ತು ಲೋಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.