ಮುಂಬೈ: ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿರುವ 'ದಿ ಫ್ಯಾಮಿಲಿ ಮ್ಯಾನ್ 2' ಮೂಲಕ ಸಖತ್ ಸದ್ದು ಮಾಡುತ್ತಿರುವ ಮನೋಜ್ ಬಾಜ್ಪೇಯಿ, ಇದೀಗ ನೆಟ್ಫ್ಲಿಕ್ಸ್ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ 2' ನಂತರ 'ರೇ' ಎಂಬ ವೆಬ್ಸೀರೀಸ್ನಲ್ಲಿ ಮನೋಜ್ ಕಾಣಿಸಿಕೊಂಡಿದ್ದು, ಈ ಸರಣಿಯು ಜೂನ್ 25ರಿಂದ ಸ್ಟ್ರೀಮ್ ಆಗಲಿದೆ.
'ರೇ' ಒಂದು ಆಂಥಾಲಜಿ (ವಿಭಿನ್ನ ಕಥೆಗಳ ಗುಚ್ಛ) ವೆಬ್ಸೀರೀಸ್ ಆಗಿದ್ದು, ಖ್ಯಾತ ನಿರ್ದೇಶಕ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಸತ್ಯಜಿತ್ ರೇ ಅವರ ನಾಲ್ಕು ಜನಪ್ರಿಯ ಕಥೆಗಳನ್ನು ಸೇರಿಸಿ ಒಂದು ಸರಣಿ ಮಾಡಲಾಗಿದೆ. ಈ ನಾಲ್ಕು ಕಥೆಗಳನ್ನು ಅಭಿಷೇಕ್ ಚೌಬೆ, ಶ್ರೀಜಿತ್ ಮುಖರ್ಜಿ ಮತ್ತು ವಸನ್ ಬಾಲಾ ನಿರ್ದೇಶನ ಮಾಡಿದ್ದು, ಈ ಸರಣಿಯ ಟ್ರೇಲರ್ ಮಂಗಳವಾರ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿದೆ.
ಈ ಪೈಕಿ ಒಂದು ಕಥೆಯಲ್ಲಿ ಮನೋಜ್ ಬಾಜ್ಪೇಯಿ, ಮುಜಫರ್ ಅಲಿ ಎಂಬ ಗಜಲ್ ಗಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಳೆದು ಹೋಗಿರುವ ತನ್ನ ಜನಪ್ರಿಯತೆಯನ್ನು ಪಡೆಯುವುದಕ್ಕೆ ಅವನು ಏನೆಲ್ಲ ಮಾಡುತ್ತಾನೆ ಎಂಬುದೇ ಕಥೆ. ಅಹಂಕಾರ, ಸೇಡು, ಹೊಟ್ಟೆಕಿಚ್ಚು ಮತ್ತು ಮೋಸ ಎಂಬ ನಾಲ್ಕು ಥೀಮ್ಗಳನ್ನಿಟ್ಟುಕೊಂಡು, ಈ ಸರಣಿ ನಿರ್ಮಿಸಲಾಗಿದೆ. ಒಂದೊಂದು ಕಥೆ, ಒಂದೊಂದು ಥೀಮ್ ಸುತ್ತ ಸುತ್ತಲಿದ್ದು, ಮನುಷ್ಯನ ಹಲವು ಮುಖಗಳನ್ನು ಈ ವೆಬ್ಸರಣಿ ತೆರೆದಿಡಲಿದೆ.
ಇಲ್ಲಿ ಮನೋಜ್ ಬಾಜ್ಪೇಯಿ ಅಷ್ಟೇ ಅಲ್ಲ, ನಾಲ್ಕೂ ಕಥೆಗಳಲ್ಲಿ ಒಬ್ಬೊಬ್ಬ ಹೀರೋ ಇದ್ದು, ಒಟ್ಟಾರೆ ಈ ಸರಣಿಯಲ್ಲಿ ಪ್ರತಿಭಾವಂತ ದಂಡೇ ಇದೆ. ಮನೋಜ್ ಜತೆಗೆ ಗಜರಾಜ್ ರಾವ್, ಕೆಕೆ ಮೆನನ್, ಹರ್ಷವರ್ಧನ್ ಕಪೂರ್, ಅಲಿ ಫಜಲ್, ಶ್ವೇತಾ ಬಸು ಪ್ರಸಾದ್ ಮುಂತಾದವರು ನಟಿಸಿದ್ದಾರೆ.
Ray Ne