

ಮುಂಬೈ: ಸಲ್ಮಾನ್ ಖಾನ್ ವಿರುದ್ಧ ಬಂಡಾಯವೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. 'ಬಿಗ್ ಬಾಸ್'ನ ಮಾಜಿ ಸ್ಪರ್ಧಿ ಸೋಫಿಯಾ ಹಯಾತ್ ಸಹ ಸಲ್ಮಾನ್ ವಿರುದ್ಧ ತಿರುಗಿಬಿದ್ದಿದ್ದು, ತಮಗೆ ಸಲ್ಮಾನ್ ಕಂಡರೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 'ಬಿಗ್ ಬಾಸ್' ಫೈನಲ್ಸ್ ವೇದಿಕೆಯಲ್ಲಿ ಸಲ್ಮಾನ್ ಜತೆಗೆ ಕಾಣಿಸಿಕೊಳ್ಳುವುದಕ್ಕೆ ಅವಕಾಶ ಸಿಕ್ಕರೆ, ಖಂಡಿತಾ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಇಷ್ಟುದ್ಧ ಪತ್ರ ಬರೆದಿರುವ ಅವರು, 'ಸಲ್ಮಾನ್ ಪ್ರತೀ ವರ್ಷ ಅದೇ ತಂತ್ರ ಮಾಡುತ್ತಾರೆ. ಈದ್ ಹಬ್ಬದ ಸಂದರ್ಭದಲ್ಲಿ ತಮ್ಮದೊಂದು ಚಿತ್ರ ಬಿಡುಗಡೆ ಮಾಡುತ್ತಾರೆ. ಹಬ್ಬವನ್ನು ಮತ್ತು ಜನರ ಭಾವನೆಗಳನ್ನು ಎನ್ಕ್ಯಾಶ್ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಾರೆ. ಹೋಗಲಿ ಅವರ ಚಿತ್ರವಾದರೂ ಚೆನ್ನಾಗಿರುತ್ತದಾ? ಅದೇ ಹಳೆಯ ಪ್ರೇಮಕಥೆಗಳು. ಪ್ರತೀ ಬಾರಿ ಒಬ್ಬ ಮಾಡಲ್ಗಳನ್ನು ನಾಯಕಿಯರನ್ನಾಗಿ ಮಾಡುವ ಬದಲು, ನಿನ್ನ ವಯಸ್ಸಿನ ಹೀರೋಯಿನ್ ಜತೆಗೆ ಯಾಕೆ ಕಾಣಿಸಿಕೊಳ್ಳುವುದಿಲ್ಲ?' ಎಂದು ಅವರು ಪ್ರಶ್ನಿಸಿದ್ದಾರೆ.
ಇಷ್ಟು ವರ್ಷ ಚಿತ್ರರಂಗದಲ್ಲಿದ್ದರೂ ಸಲ್ಮಾನ್ ಬೆಳೆದಿಲ್ಲ ಎಂದು ಆರೋಪಿಸಿರುವ ಅವರು, 'ಸಲ್ಮಾನ್ ಅವರ ಅಭಿಮಾನಿಗಳು ಮತ್ತು ಪ್ರೇಕ್ಷಕರು ಬೆಳೆದಿದ್ದಾರೆಯೇ ಹೊರತು, ಸಲ್ಮಾನ್ ಇನ್ನೂ ಬೆಳೆದಿಲ್ಲ. ಅದೇ ಹಳೆಯ ಕಥೆಗಳನ್ನಿಟ್ಟುಕೊಂಡೇ, ಅದೇ ಹಳೆಯ ಚಿತ್ರಗಳನ್ನು ಮಾಡುತ್ತಿದ್ದಾರೆ. ಚಿತ್ರ ನೋಡುವುದಿರಲಿ, ಬರೀ ಟ್ರೈಲರ್ ನೋಡಿದರೆ, ಇದನ್ನೆಲ್ಲೋ ನೋಡಿದ ಹಾಗನಿಸುತ್ತದೆ' ಎಂದು ಸೋಫಿಯಾ ಹೇಳಿದ್ದಾರೆ.
ನಾವು ಸಾಕಷ್ಟು ಬದಲಾಗಿದ್ದೇವೆ ಎಂದಿರುವ ಅವರು, 'ಈ ದೇಶದ ಜನ ಮೂರ್ಖರಲ್ಲ. ಅವರು ಜಾಣರು ಮತ್ತು ಪ್ರತಿದಿನ ಬದಲಾಗುತ್ತಲೇ ಇರುತ್ತಾರೆ. ಅವರಿಗೆ ಇಷ್ಟವಾಗುವಂತಹ ಸಿನಿಮಾ ಮಾಡಿ' ಎಂದು ಸೋಫಿಯಾ ಸಲಹೆ ನೀಡಿದ್ದಾರೆ. ಇಷ್ಟಕ್ಕೂ ಸಲ್ಮಾನ್ ವಿರುದ್ಧ ಸೋಫಿಯಾ ತಿರುಗಿ ಬಿದ್ದಿದ್ದೇಕೆ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.