ಸಿನಿವಾಣಿ

ರವಿಚಂದ್ರನ್ ಅಭಿನಯದಲ್ಲಿ ಸಿನಿಮಾ ಮಾಡ್ತಾರಾ ಗಿರಿರಾಜ್?

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಎರಡು ದಿನಗಳ ಹಿಂದಷ್ಟೇ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಅಂದು ಕನ್ನಡ ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಞರು ಅವರನ್ನೂ ಭೇಟಿ ಮಾಡಿ ಶುಭ ಕೋರಿದ್ದಾರೆ.

ಈ ಮಧೆ, ನಿರ್ದೇಶಕ ‘ಜಟ್ಟ’ ಗಿರಿರಾಜ್ ಹಾಗೂ ನಿರ್ಮಾಪಕ ರಾಜಕುಮಾರ್ ಸಹ ರವಿಚಂದ್ರನ್ ಅವರನ್ನು ಭೇಟಿ ಮಾಡಿ, ಹುಟ್ಟುಹಬ್ಬಕ್ಕೆ ಹಾರೈಸಿದ್ದಾರೆ. ನಂತರ ಟ್ವೀಟ್ ಮಾಡಿರುವ ಗಿರಿರಾಜ್, ‘ಒಂದು ಕ್ರೇಜಿ ನ್ಯೂಸ್ ಸದ್ಯದಲ್ಲೇ ಬರಲಿದೆ’ ಎಂದು ಹೇಳಿಕೊಂಡಿದ್ದಾರೆ.

ಇಷ್ಟಕ್ಕೂ ಆ ಕ್ರೇಜಿ ನ್ಯೂಸ್ ಏನು? ರವಿಚಂದ್ರನ್ ಅವರ ಜತೆಗೆ ‘ಜಟ್ಟ’ ಗಿರಿರಾಜ್ ಚಿತ್ರವನ್ನೇನಾದರೂ ಮಾಡುತ್ತಿದ್ದಾರಾ? ಈ ರಹಸ್ಯವನ್ನು ಅವರು ಎಲ್ಲೂ ಬಿಟ್ಟುಕೊಟ್ಟಿಲ್ಲ. ಬರೀ ಒಂದು ಕ್ರೇಜಿ ನ್ಯೂಸ್ ಬರಲಿದೆ ಎಂದಷ್ಟೇ ಹೇಳಿಕೊಂಡಿದ್ದಾರೆ.

ಆದರೆ, ಮೂಲಗಳ ಪ್ರಕಾರ, ರವಿಚಂದ್ರನ್ ಅಭಿನಯದಲ್ಲಿ ರಾಜಕುಮಾರ್ ಒಂದು ಚಿತ್ರವನ್ನು ನಿರ್ದೇಶಿಸಲಿದ್ದು, ಆ ಚಿತ್ರವನ್ನು ಗಿರಿರಾಜ್ ನಿರ್ದೇಶನ ಮಾಡುತ್ತಿದ್ದಾರಂತೆ. ಈ ಹಿಂದೆ, ರಾಜಕುಮಾರ್ ನಿರ್ಮಾಣದ ‘ಜಟ್ಟ’ ಮತ್ತು ‘ಮೈತ್ರಿ’ ಚಿತ್ರಗಳನ್ನು ಗಿರಿರಾಜ್ ನಿರ್ದೇಶನ ಮಾಡಿದ್ದು, ಇದು ಈ ಕಾಂಬಿನೇಷನ್‌ನ ಮೂರನೆಯ ಚಿತ್ರವಾಗಲಿದೆ ಎಂದು ಹೇಳಲಾಗಿದೆ. ಆದರೆ, ಈ ವಿಷಯವಾಗಿ ರವಿಚಂದ್ರನ್ ಆಗಲೀ, ರಾಜಕುಮಾರ್ ಅಥವಾ ಗಿರಿರಾಜ್ ಆಗಲೀ ರಹಸ್ಯ ಕಾಪಾಡಿಕೊಂಡಿದ್ದಾರೆ. ಬಹುಶಃ ಲಾಕ್‌ಡೌನ್ ಸಂಪೂರ್ಣವಾಗಿ ಮುಗಿದ ನಂತರ ಚಿತ್ರದ ಬಗ್ಗೆ ಘೋಷಿಸುವ ಸಾಧ್ಯತೆ ಇದೆ.

ರವಿಚಂದ್ರನ್ ಅವರು ‘ರವಿ ಬೋಪಣ್ಣ’ ಚಿತ್ರವನ್ನು ಮುಗಿಸಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಇನ್ನೊಂದಿಷ್ಟು ಕಥೆಗಳನ್ನು ಮತ್ತು ಹಾಡುಗಳನ್ನು ಮಾಡಿಟ್ಟುಕೊಂಡಿದ್ದಾರೆ. ಆ ಪೈಕಿ ಒಂದು ಚಿತ್ರದಲ್ಲಿ ರವಿಚಂದ್ರನ್ ಮತ್ತು ಅವರ ಮಗ ವಿಕ್ರಮ್ ಇಬ್ಬರೂ ಜತೆಯಾಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ.