ಅವಮಾನ ಆಯ್ತು ಅಂತ ಕಂಪ್ಲೇಂಟ್ ಕೊಟ್ಟ ವಡಿವೇಲು!

Vadivelu Final
Published on

ತಮಿಳು ಚಿತ್ರರಂಗದಲ್ಲಿ ಸದಾ ಸುದ್ದಿಯಲ್ಲಿರುವ ನಟರೆಂದರೆ ಅದು ಖ್ಯಾತ ಕಾಮಿಡಿ ನಟ ವಡಿವೇಲು. ತಮ್ಮ ನಟನೆ ಮತ್ತು ನಡವಳಿಕೆಯಿಂದ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ವಡಿವೇಲು, ಈಗ ತಮ್ಮ ಸಹನಟರ ವಿರುದ್ಧ ದೂರು ಕೊಟ್ಟಿದ್ದಾರೆ.

ಇಷ್ಕಕೂ ವಡಿವೇಲು ಯಾಕೆ ದೂರು ಕೊಟ್ಟರು ಎಂದರೆ, ಅದಕ್ಕೆ ಉತ್ತರ ಅವರಿಗೆ ಅವಮಾನವಾಗಿರುವುದು. ಅವರಿಗ್ಯಾಕೆ ಅವಮಾನವಾಯಿತು ಎಂದರೆ, ಅದಕ್ಕೊಂದು ಫ್ಲಾಶ್‌ಬ್ಯಾಕ್ ಇದೆ. ಅದೇನೆಂದರೆ, ತಮಿಳಿನ ಜನಪ್ರಿಯ ನಟ ಮತ್ತು ಬರಹಗಾರ ಮನೋಬಾಲ ಯೂಟ್ಯೂಬ್ ಚಾನಲ್‌ನಲ್ಲಿ ವೇಸ್ಟ್ ಪೇಪರ್ ಎಂಬ ಚಾನಲ್ ನಡೆಸುತ್ತಾರೆ. ಆ ಚಾನಲ್‌ನಲ್ಲಿ ಆಗಾಗ ಜನಪ್ರಿಯ ನಟರ ಸಂದರ್ಶನ ಮಾಡುವ ಮನೋಬಾಲ, ಇತ್ತೀಚೆಗೆ ಸಿಂಗಮುತ್ತು ಎಂಬ ನಗೆನಟನ ಸಂದರ್ಶನ ಮಾಡಿದ್ದಾರೆ.

ಈ ಸಿಂಗಮುತ್ತು ಮತ್ತು ವಡಿವೇಲು ಒಂದು ಕಾಲದಲ್ಲಿ ತಮಿಳಿನ ಅತ್ಯಂತ ಜನಪ್ರಿಯ ಜೋಡಿಯಾಗಿದ್ದರು. ಹಲವು ಚಿತ್ರಗಳಲ್ಲಿ ತಮ್ಮ ಕಾಮಿಡಿ ಮೂಲಕ ಜನರನ್ನು ನಗಿಸಿದ್ದರು. ಆದರೆ, ಒಂದು ಹಂತದಲ್ಲಿ ಇಬ್ಬರಿಗೂ ಕಾರಣಾಂತರಗಳಿಂದ ಬಿಟ್ಟು ಹೋಯಿತು. ಇಬ್ಬರೂ ದೂರ ದೂರ ಆದರು. ಸಂದರ್ಶನದಲ್ಲಿ ಅವರಿಬ್ಬರು ದೂರಾದ ಬಗ್ಗೆ ಸಿಂಗಮುತ್ತು ಅವರನ್ನು ಮನೋಬಾಲ ಒಂದಿಷ್ಟು ಪ್ರಶ್ನೆ ಕೇಳಿದ್ದಾರೆ. ಉತ್ತರ ಹೇಳುವ ಭರದಲ್ಲಿ ಸಿಂಗಮುತ್ತು, ವಡಿವೇಲು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರಂತೆ. ಹಾಗಾಗಿ ಸಿಂಗಮುತ್ತು ಮತ್ತು ಮನೋಬಾಲ ವಿರುದ್ಧ ದಕ್ಷಿಣ ಭಾರತ ಕಲಾವಿದರ ಸಂಘ (ನಡಿಗರ್ ಸಂಗಂ)ಕ್ಕೆ ಪತ್ರ ಬರೆದಿರುವ ವಡಿವೇಲು, ಅವರಿಬ್ಬರಿಂದ ತಮಗೆ ತುಂಬಾ ಅವಮಾನವಾಗಿದೆ ಎಂದು ದೂರು ಕೊಟ್ಟಿದ್ದಾರೆ.

ಎಲ್ಲಾ ಸರಿ, ಸಿಂಗಮುತ್ತು ಏನೋ ವಡಿವೇಲು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು. ಇದರಲ್ಲಿ ಮನೋಬಾಲ ತಪ್ಪೇನಿದೆ ಎಂಬ ಪ್ರಶ್ನೆ ಬರಬಹುದು. ಅಲ್ಲೇ ಇರೋದು ಟ್ವಿಸ್ಟು. ಈ ಸಂದರ್ಶನದ ಕೆಲವು ತುಣುಕುಗಳನ್ನು ಮನೋಬಾಲ ಅವರು ಕಲಾವಿದರ ವಾಟ್ಸಾಪ್ ಗ್ರೂಪ್ ಹಾಕಿದ್ದರಂತೆ. ಅದನ್ನು ಹಲವು ಕಲಾವಿದರು ನೋಡಿ ವಡಿವೇಲುಗೆ ಫೋನ್ ಮಾಡಿದ್ದರಂತೆ. ಇದೆಲ್ಲದರಿಂದ ತಮಗೆ ಬಹಳ ಅವಮಾನವಾಗಿದೆ ಎಂದು ಅವರ ಹೆಸರನ್ನೂ ದೂರಿನಲ್ಲಿ ಸೇರಿಸಿದ್ದಾರೆ ವಡಿವೇಲು.

ವಡಿವೇಲು ಏನೋ ತಮಗೆ ಅನ್ಯಾಯವಾಗಿದೆ, ಅವಮಾನವಾಗಿದೆ ಎಂದು ದೂರು ಕೊಟ್ಟಿದ್ದಾರೆ. ಈ ಪ್ರಕರಣವನ್ನು ನಡಿಗರ್ ಸಂಗಂ ಹೇಗೆ ಬಗೆಹರಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net