ಮುಂಬೈ: ಸೋಮವಾರವಷ್ಟೇ ನಟ ಮತ್ತು ಸಂಸದ ರವಿಕಿಶನ್ ಸಂಸತ್ತಿನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದರು. ಬಾಲಿವುಡ್ನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಬಳಕೆಯ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು. ಈ ವಿಷಯವಾಗಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದರು.
'ದೇಶದ ಯುವಜನತೆಯನ್ನು ದಿಕ್ಕುತಪ್ಪಿಸಲು ನೆರೆರಾಷ್ಟ್ರಗಳು ಸಂಚು ರೂಪಿಸುತ್ತಿವೆ. ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗಿ ಪಂಜಾಬ್ ಮತ್ತು ನೇಪಾಳದ ಮೂಲಕ ಇಲ್ಲಿಗೆ ಡ್ರಗ್ಸ್ ತರಲಾಗುತ್ತಿದೆ. ಡ್ರಗ್ಸ್ ಚಟ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗದಲ್ಲೂ ಜಾಸ್ತಿಯಾಗಿದೆ. ಈ ವಿಷಯವಾಗಿ ಎನ್ಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದ್ದರು.
ಈಗ ಅವರ ಮಾತಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಟಾಂಗ್ ಕೊಟ್ಟಿದ್ದಾರೆ. ಬಾಲಿವುಡ್ನಲ್ಲಿ ಯಾರಾದರೂ ಅತೀ ಹೆಚ್ಚು ಮಾದಕವಸ್ತುಗಳನ್ನು ಬಳಿಸಿದ್ದಾರೆ ಎಂದರೆ ಅದು ರವಿಕಿಶನ್ ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ರವಿಕಿಶನ್ ಅವರು ನನ್ನ 'ಮುಕ್ಕಾಬಾಜ್' ಚಿತ್ರದಲ್ಲಿ ನಟಿಸಿದ್ದರು. ರವಿಕಿಶನ್ ಅವರ ದಿನ ಶುರುವಾಗುತ್ತಿದ್ದುದೇ ಮಾದಕವಸ್ತುಗಳಿಂದ. ಬಹುಶಃ ಬಾಲಿವುಡ್ನಲ್ಲಿ ಯಾರಾದರೂ ಅತೀ ಹೆಚ್ಚು ಕಾಲ ಮಾದಕವಸ್ತುಗಳನ್ನು ಬಳಸಿದ್ದಾರೆಂದರೆ ಅದು ರವಿಕಿಶನ್ ಎಂದು ಎಲ್ಲರಿಗೂ ಗೊತ್ತಿದೆ. ಹಾಗಂತ ಅವರು ಯಾವತ್ತೂ ಕೆಟ್ಟದಾಗಿ ವರ್ತಿಸಲಿಲ್ಲ. ಮೃಗದಂತೆ ಆಡಲಿಲ್ಲ. ಬಹಳ ಚೆನ್ನಾಗಿಯೇ ಕೆಲಸ ಮಾಡಿದರು' ಎಂದು ಅನುರಾಗ್ ಹೇಳಿದ್ದಾರೆ.
ಬಹುಶಃ ಇದೀಗ ಅವರ ಸಂಸದರಾಗಿರುವುದರಿಂದ ಅವೆಲ್ಲವನ್ನೂ ಬಿಟ್ಟಿರಬಹುದು ಎಂದಿರುವ ಅನುರಾಗ್ ಕಶ್ಯಪ್, 'ಈಗವರು ಬಿಟ್ಟಿರಬಹುದು. ಆದರೆ, ಆ ಬಗ್ಗೆ ಮಾತನಾಡಿದ್ದು ಆಶ್ಚರ್ಯವಾಯಿತು' ಎಂದು ಅನುರಾಗ್ ಹೇಳಿಕೊಂಡಿದ್ದಾರೆ.