ಕರೊನಾ ಲಾಕ್ಡೌನ್ ಪ್ರಕ್ರಿಯೆ ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿಯೇ ಒಂದಷ್ಟು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗುತ್ತಿದೆ. ಅದರಲ್ಲೂ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳ ನಡುವೆಯೇ ಒಂದಷ್ಟು ಸಿನಿಮಾ ತಂಡಗಳು ಶೂಟಿಂಗ್ ಆರಂಭಿಸಿವೆ. ಈಗಾಗಲೇ ಒಂದಷ್ಟು ಬಾಲಿವುಡ್ ತಾರೆಯರು ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ. ಇದೀಗ ನಟಿ ರವೀನಾ ಟಂಡನ್ ಸಹ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: VIDEO: ಕುರಿ ಕಾಯೋಕೆ ಹೊಂಟ್ರು ಸತೀಶ್ ನೀನಾಸಂ!
ಇತ್ತೀಚೆಗಷ್ಟೇ ಆಯುಷ್ಮಾನ್ ಖುರಾನಾ ಮತ್ತು ತಾಪ್ಸೀ ಪನ್ನು ಜಾಹೀರಾತುವೊಂದರ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಇದೀಗ ರವೀನಾ ಟಂಡನ್ ಸಹ ಸ್ಯಾನಿಟೈಸರ್ ಜಾಹೀರಾತಿನಲ್ಲಿ ಭಾಗವಹಿಸಿದ್ದಾರೆ. ಮನೆಯಲ್ಲಿಯೇ ನಡೆಯುತ್ತಿರುವ ಚಿತ್ರೀಕರಣದಲ್ಲಿ ಕೇವಲ ಬೆರಳೆಣಿಕೆ ಮಂದಿ ಮಾತ್ರ ಪಾಲ್ಗೊಂಡಿದ್ದಾರೆ. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ ರವೀನಾ.
ತಮ್ಮ ಮನೆಯಲ್ಲಿ ನಡೆಯುತ್ತಿರುವ ಜಾಹೀರಾತು ಶೂಟಿಂಗ್ನಲ್ಲಿ ಒಟ್ಟು ಮೂವರು ಭಾಗವಹಿಸಿದ್ದರು, ರವೀನಾ ಹೊರತುಪಡಿಸಿ ಮಿಕ್ಕವರೆಲ್ಲ ಪಿಪಿಇ ಕಿಟ್ ಧರಿಸಿದ್ದಾರೆ. ಸರ್ಕಾರದ ಆದೇಶದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಯೇ ಚಿತ್ರೀಕರಣ ಮಾಡುತ್ತಿರುವುದಾಗಿಯೂ ರವೀನಾ ಹೇಳಿಕೊಂಡಿದ್ದಾರೆ.
ಸದ್ಯ ಸ್ಯಾಂಡಲ್ವುಡ್ನಲ್ಲಿ ಹವಾ ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ರವೀನಾ ನಟಿಸಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣವೂ ಮುಗಿದಿದೆ. (ಏಜೆನ್ಸೀಸ್)