ಸಿನಿವಾಣಿ

ಮಿಷನ್ ಮಜ್ನು ಚಿತ್ರಕ್ಕೆ ಇನ್ನಾರು ತಿಂಗಳು; ಮೇ. 13ಕ್ಕೆ ರಶ್ಮಿಕಾ ಅಭಿನಯದ ಮೊದಲ ಹಿಂದಿ ಚಿತ್ರ

ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದೇನೋ ಆಯಿತು. ಆದರೆ, ಆ ಚಿತ್ರದ ಬಿಡುಗಡೆ ಯಾವಾಗ? ಈ ಕುತೂಹಲ ಬರೀ ರಶ್ಮಿಕಾಗೆ ಮಾತ್ರವಲ್ಲ, ಅವರ ಅಭಿಮಾನಿಗಳಿಗೂ ಇದೆ. ಈ ಪ್ರಶ್ನೆಗೆ ಈಗ ಕೊನೆಗೂ ಉತ್ತರ ಸಿಕ್ಕಿದೆ. ರಶ್ಮಿಕಾ ಅಭಿನಯದ ಮೊದಲ ಬಾಲಿವುಡ್ ಚಿತ್ರ ಮೇ 13ಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಲಾಕ್​ಡೌನ್ ಮುಗಿದ ಮೇಲೆ, ಬಾಲಿವುಡ್​ನಲ್ಲಿ ‘ಮಿಷನ್ ಮಜ್ನು’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು ರಶ್ಮಿಕಾ. ಸಿದ್ಧಾರ್ಥ್ ಮಲ್ಹೋತ್ರಾಗೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು.

ಚಿತ್ರದ ಚಿತ್ರೀಕರಣ ಮುಗಿಯುವುದಕ್ಕೆ ಮುನ್ನವೇ, ಅಮಿತಾಭ್ ಬಚ್ಚನ್ ಅಭಿನಯದ ‘ಗುಡ್​ಬೈ’ ಎಂಬ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೂ ರಶ್ಮಿಕಾಗೆ ಅವಕಾಶ ಸಿಕ್ಕಿತ್ತು. ಬಾಲಿವುಡ್​ನಲ್ಲಿ ಅವಕಾಶಗಳೇನೂ ಕಡಿಮೆ ಇಲ್ಲ. ಆದರೆ, ಮೊದಲ ಚಿತ್ರದ ಬಿಡುಗಡೆಯ ಸುದ್ದಿಯೇ ಇರಲಿಲ್ಲ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, 2022ರ ಮೇ 13ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡದವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಸಹ ಹಾಕಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ನಿರ್ವಿುಸಲಾದ ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ರಶ್ಮಿಕಾ ಅಲ್ಲದೇ ಪರಮೀತ್ ಸೇಠಿ, ಜಾಕಿರ್ ಹುಸೇನ್ ಮುಂತಾದವರು ನಟಿಸಿದ್ದಾರೆ.