ಮುಂಬೈ: ಬಾಲಿವುಡ್ನಲ್ಲಿ ಲವ್ಬರ್ಡ್ಸ್ ಎಂದೇ ಜನಪ್ರಿಯವಾದವರು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. ಕಳೆದ ಒಂದು ವರ್ಷದಿಂದ ಈ ಜೋಡಿ ಮದುವೆಯಾಲಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಲೇ ಇದ್ದು, ಈ ಮದುವೆ ಮುಂದಿನ ವರ್ಷಕ್ಕೆ ಪೋಸ್ಟ್ಪೋನ್ ಆಗಿದೆ.
ಈ ಮಧ್ಯೆ, ರಣಬೀರ್ ಮತ್ತು ಆಲಿಯಾ ಭಟ್ ಸುಮಾರು ಆರು ತಿಂಗಳ ಕ್ವಾರಂಟೈನ್ ನಂತರ ಇದೀಗ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ರಣಬೀರ್ ಮತ್ತು ಆಲಿಯಾ ಇಬ್ಬರೂ 'ಬ್ರಹ್ಮಾಸ್ತ್ರ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಲಾಕ್ಡೌನ್ ಶುರುವಾಗುವ ಹೊತ್ತಿಗೆ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಈ ಮಧ್ಯೆ ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಚಿತ್ರೀಕರಣ ನಿಂತಿತ್ತು.
ಇದನ್ನೂ ಓದಿ: ‘ಮಾದಕ’ ನಟಿಗಾಗಿ ಹೆಂಡತಿಯನ್ನೇ ತೊರೆದ ರವಿಶಂಕರ್!
ಇದೀಗ ಚಿತ್ರೀಕರಣ ಚಟುವಟಿಕೆಗಳೆಲ್ಲಾ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ರಣಬೀರ್ ಮತ್ತು ಆಲಿಯಾ ಇಬ್ಬರೂ 'ಬ್ರಹ್ಮಾಸ್ತ್ರ' ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಡಬ್ಬಿಂಗ್ ಸ್ಟುಡಿಯೋದಲ್ಲಿ ಅವರಿಬ್ಬರೂ ಡಬ್ಬಿಂಗ್ ಕೆಲಸಗಳನ್ನು ಮುಗಿಸಿದ್ದು, ಇನ್ನು ಬಾಕಿ ಇರುವ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
'ಬ್ರಹ್ಮಾಸ್ತ್ರ' ಚಿತ್ರಕ್ಕೆ ಇನ್ನು 15 ದಿನಗಳ ಚಿತ್ರೀಕರಣ ಬಾಕಿ ಇದ್ದು, ಕೆಲವು ದೃಶ್ಯಗಳು ಮತ್ತು ಹಾಡೊಂದರ ಚಿತ್ರೀಕರಣ ನಡೆಸಬೇಕಾಗಿದೆಯಂತೆ. ಸದ್ಯದಲ್ಲೇ ಮುಂಬೈನಲ್ಲೇ ಒಂದು ಸ್ಟುಡಿಯೋದಲ್ಲೇ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದ್ದು, ಅಲ್ಲೇ ಸೆಟ್ ಹಾಕಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ ಮಾಡಲಾಗುವುದಂತೆ.
ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರು ಸಹ ಸದ್ಯದಲ್ಲೇ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ಮಿಕ್ಕಂತೆ ನಾಗಾರ್ಜುನ, ಡಿಂಪಲ್ ಕಪಾಡಿಯಾ, ಮೌನಿ ರಾಯ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಮುಗಿದಿರಬೇಕಿತ್ತು. ಆದರೆ, ಹಲವು ಕಾರಣಗಳಿಗಾಗಿ ಚಿತ್ರೀಕರಣ ತಡವಾಯಿತು. ಇದೀಗ ಡಿಸೆಂಬರ್ 4ರಂದು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.