ಬೆಂಗಳೂರು: 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ ಇದೀಗ ಕಾಮಿಡಿ ಬಿಟ್ಟು ಸ್ವಲ್ಪ ಸೀರಿಯಸ್ ಆಗಿದ್ದಾರೆ. ಅವರು 'ರಕ್ತದೋಕುಳಿ' ಎಂಬ ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಟೀಸರ್ ಬಿಡುಗಡೆಯಾಗಿದೆ. ಡಾ. ರಾಜಕುಮಾರ್ ಮೊಮ್ಮಗ ಧೀರೇನ್ ರಾಮ್ಕುಮಾರ್, ಈ ಚಿತ್ರದ ಟೀಸರ್ ಲಾಂಚ್ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಕನ್ನಡಕ್ಕೆ ಕಬೀರ್ ಬೇಡಿ; ಹಂಟರ್ ಚಿತ್ರದಲ್ಲಿ ನಟನೆ
ಬೆಂಗಳೂರಿನ ಸ್ಲಂಗಳಲ್ಲಿ ನಡೆಯುವ ಕಥೆ ಚಿತ್ರದಲ್ಲಿದ್ದು, ಸ್ಲಂ ಹುಡುಗರು ಹೇಗೆ ಅಲ್ಲಿನ ವಾತಾವರಣದಿಂದ ಪ್ರೇರಿತರಾಗಿ ಅಡ್ಡದಾರಿ ಹಿಡಿಯುತ್ತಾರೆ, ತಪ್ಪು ದಾರಿ ಹಿಡಿದ ಮೇಲೆ ಏನೆಲ್ಲ ಕ್ರೈಂ ಮಾಡುತ್ತಾರೆ ಎನ್ನುವುದರ ಕುರಿತು ಕಥೆ ಹಣೆಯಲಾಗಿದೆಯಂತೆ. ಎನ್ ಎನ್ ಜಾಕಿ ಈಡಿಗರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡಿರುವ ಅವರು, 'ಈ ಚಿತ್ರದ ಮೂಲಕ ಕ್ರೈಂ ಮಾಡಬೇಡಿ ಅನ್ನೋದನ್ನ ಸೂಕ್ಷ್ಮವಾಗಿ ಹೇಳ ಹೊರಟಿದ್ದು. ಐದು ಜನ ಹುಡುಗರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಯನ ಕೂಡ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ' ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಜಾಕಿ ಈಡಿಗರ್.
ಇದನ್ನೂ ಓದಿ: ಮೊದಲು ಮಾನವನಾಗು; ‘ತೋತಾಪುರಿ’ ತಿಂದ ಅದಿತಿ ಮನದ ಮಾತು…
'ರಕ್ತದೋಕುಳಿ' ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಈ ಚಿತ್ರವನ್ನು ಎಂ ನಾಗರಾಜು ನಿರ್ಮಿಸುತ್ತಿದ್ದಾರೆ. ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿದ್ದು, ಇಡೀ ಸಿನಿಮಾ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಚಿತ್ರದಲ್ಲಿ ನಟಿಸಿದ್ದು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ನಿರ್ಮಾಪಕ ನಾಗರಾಜು ಸಹ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಲೋಕಲ್ ಲೋಕಿ ಸಾಹಿತ್ಯ, ಅನಿಲ್ ಸಿ ಜೆ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ರಂಗಸ್ವಾಮಿ ಎಲ್ ಛಾಯಾಗ್ರಹಣ ಈ ಚಿತ್ರಕ್ಕಿದೆ.