More

    ಮೊದಲು ಮಾನವನಾಗು; ‘ತೋತಾಪುರಿ’ ತಿಂದ ಅದಿತಿ ಮನದ ಮಾತು…

    ‘ಇದು ನನಗೆ ಮಾತ್ರವಲ್ಲ, ಹೊಸ ಯೋಚನೆಯ ಮತ್ತು ಹೊಸ ಜಾನರ್​ನ ಚಿತ್ರಗಳಿಗೆ ತಿರುವು ಕೊಡುವ ಚಿತ್ರ. ಈ ಚಿತ್ರ ಗೆದ್ದರೆ ಮುಂದೆ ಈ ತರಹದ ಹೊಸ ಯೋಚನೆಯ ಇನ್ನಷ್ಟು ಸಿನಿಮಾಗಳು ಬರುವ ಸಾಧ್ಯತೆ ಇದೆ …’ ಅದಿತಿ ಪ್ರಭುದೇವ ಹೀಗೆ ಹೇಳಿದ್ದು ‘ತೋತಾಪುರಿ’ ಚಿತ್ರದ ಬಗ್ಗೆ. ಮುಂದಿನ ಶುಕ್ರವಾರ (ಸೆ. 30) ಬಿಡುಗಡೆಯಾಗುತ್ತಿರುವ ‘ತೋತಾಪುರಿ’ ಬಗ್ಗೆ ಒಂದಿಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅದಿತಿ. ಕಾರಣ, ಚಿತ್ರದಲ್ಲಿರುವ ವಿಷಯ.

    ‘ನಾನು ಚಿತ್ರ ನೋಡಿದ್ದೇನೆ. ಶೂಟಿಂಗ್ ಮಾಡುವಾಗ ಒಂದು ಭಯವಿತ್ತು. ಚಿತ್ರದಲ್ಲಿ ಹಲವು ಧರ್ಮಗಳ ಕುರಿತಾಗಿ ತೋರಿಸಲಾಗಿದೆ. ಮುಂದೆ ಸಮಸ್ಯೆಯಾದರೆ, ಟ್ರೋಲ್ ಆದರೆ ಏನು ಕಥೆ ಎಂದನಿಸಿತ್ತು. ಆದರೆ, ವಿಜಯಪ್ರಸಾದ್ ಬಹಳ ಚೆನ್ನಾಗಿ ಹ್ಯಾಂಡಲ್ ಮಾಡಿದ್ದಾರೆ. ಯಾವ ಧರ್ಮದ ಭಾವನೆಗಳಿಗೂ ಧಕ್ಕೆಯಾಗದಂತೆ ಮಾಡಿದ್ದಾರೆ. ಯಾವುದೇ ಧರ್ಮವಾದರೂ, ಎಲ್ಲಕ್ಕಿಂತ ಮನುಷ್ಯತ್ವ ಮುಖ್ಯ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ’ ಎನ್ನುತ್ತಾರೆ ಅದಿತಿ.

    ಈ ಚಿತ್ರಕ್ಕಾಗಿ ಅವರು ಒಂದಿಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರಂತೆ. ‘ಪ್ರಮುಖವಾಗಿ ಪಾತ್ರಕ್ಕಾಗಿ ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಇಲ್ಲಿ ಸಂಭಾಷಣೆ ಹೇಳುವ ರೀತಿ ಬೇರೆ. ಮೇಲಾಗಿ, ಎಲ್ಲ ದೊಡ್ಡ ಕಲಾವಿದರು ಇರುತ್ತಿದ್ದರು. ಅವರ ಎದುರು ಹೆಚ್ಚು ರೀಟೇಕ್ ತೆಗೆದುಕೊಳ್ಳುವ ಹಾಗಿರಲಿಲ್ಲ. ಹಾಗಾಗಿ ಬಹಳ ಕಾನ್ಶಿಯಸ್ ಆಗಿಯೇ ಈ ಚಿತ್ರದಲ್ಲಿ ನಟಿಸಿದ್ದೇನೆ’ ಎನ್ನುತ್ತಾರೆ ಅದಿತಿ. ವಿಜಯಪ್ರಸಾದ್ ಚಿತ್ರ ಎಂದರೆ ಅಲ್ಲಿ ಡಬಲ್ ಮೀನಿಂಗ್​ಗಳದ್ದೇ ಸಾಮ್ರಾಜ್ಯ. ಆದರೆ, ತನಗೆ ಅವೆಲ್ಲ ಗೊತ್ತಾಗುವಷ್ಟರಲ್ಲಿ ಚಿತ್ರವೇ ಮುಗಿದು ಹೋಗಿತ್ತು ಎನ್ನುತ್ತಾರೆ ಅದಿತಿ. ‘ವಿಜಯಪ್ರಸಾದ್ ಚಿತ್ರಗಳಲ್ಲಿ ಸ್ವಲ್ಪ ಚೇಷ್ಟೆ ಇರುತ್ತದೆ ಎಂದು ಗೊತ್ತಿತ್ತು. ಆದರೆ, ಸಂಭಾಷಣೆಗಳು ಸಿಂಗಲ್ಲೋ, ಡಬ್ಬಲ್ಲೋ ಗೊತ್ತಾಗುತ್ತಿರಲಿಲ್ಲ. ನನಗೆ ಅವೆಲ್ಲ ಅರ್ಥವಾಗುವಷ್ಟರಲ್ಲಿ ಚಿತ್ರವೇ ಮುಗಿದು ಹೋಗಿತ್ತು’ ಎಂದು ನಗುತ್ತಲೇ ಹೇಳುತ್ತಾರೆ ಅದಿತಿ. ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಜಗ್ಗೇಶ್, ಅದಿತಿ ತಮ್ಮ ಮಕ್ಕಳ ವಯಸ್ಸಿನವರು ಎಂದು ಹೇಳಿಕೊಂಡಿದ್ದರು. ತಮ್ಮ ತಂದೆ ವಯಸ್ಸಿನವರ ಜತೆ ನಾಯಕಿಯಾಗಿ ನಟಿಸುವುದಕ್ಕೆ ಅವಕಾಶ ಬಂದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು ಎಂದರೆ, ‘ಜಗ್ಗೇಶ್, ಶಿವಣ್ಣ, ರವಿಚಂದ್ರನ್ ಸಾರ್ ಜತೆ ನಟಿಸುವುದಕ್ಕೆ ಅವಕಾಶ ಸಿಗೋದೇ ಕಷ್ಟ. ಅಂಥದ್ದೊಂದು ಅವಕಾಶ ಸಿಗುವಾಗ ಯೋಚನೆ ಮಾಡ್ತೀನಾ? ಹಾಗೆ ಯೋಚನೆ ಮಾಡಿದರೆ ಚೀಪ್ ಆಗುತ್ತದೆ. ಜಗ್ಗೇಶ್ ಅವರ ಜತೆಗೆ ಕೆಲಸ ಮಾಡಿದ್ದು ನಿಜಕ್ಕೂ ಬಹಳ ಸಹಾಯವಾಯಿತು’ ಎನ್ನುತ್ತಾರೆ ಅದಿತಿ.

    ಕೊನೆ ತನಕ ಚಿತ್ರರಂಗದಲ್ಲಿ…: ಅದಿತಿ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಮದುವೆಯ ನಂತರ ಅವರು ಯಾವುದೇ ಕಾರಣಕ್ಕೂ ಚಿತ್ರರಂಗ ಬಿಡುವುದಿಲ್ಲವಂತೆ. ‘ನನ್ನನ್ನು ಮದುವೆಯಾಗುವ ಹುಡುಗ ಸಹ ನಾನು ಈ ರಂಗದಲ್ಲಿ ಮುಂದುವರಿ ಯುವುದಕ್ಕೆ ಒಪ್ಪಿದ್ದಾರೆ. ಒಳ್ಳೆಯ ಪಾತ್ರಗಳು ಬಂದರೆ ಖಂಡಿತಾ ಮುಂದುವರಿಸುತ್ತೇನೆ. ತಂದೆ-ತಾಯಿಗಿಂತ ನನಗೆ ಕ್ಯಾಮೆರಾ ಹೆಚ್ಚು. ಕೊನೆಯವರೆಗೂ ಚಿತ್ರರಂಗ ಬಿಡುವುದಿಲ್ಲ. ಈ ರಂಗದಲ್ಲೇ ಇರುತ್ತೇನೆ. ಹೇಗೆ ಅಂತ ಗೊತ್ತಿಲ್ಲ. ಬರೀ ನಟನೆಯಷ್ಟೇ ಅಲ್ಲ, ಬೇರೆ ರೀತಿ ಸಹ ತೊಡಗಿಸಿಕೊಳ್ಳುವಾಸೆ. ಇಷ್ಟು ದಿನ ನನಗೆ ಹೆಸರು, ಅನ್ನ ಕೊಟ್ಟಿದ್ದಕ್ಕೆ ಋಣ ತೀರಿಸಬೇಕು’ ಎನ್ನುತ್ತಾರೆ ಅದಿತಿ.

    ಸಂಖ್ಯೆ ಲೆಕ್ಕ ಹಾಕೋದು ಮೂರ್ಖತನ!: ಅದಿತಿ ಅಭಿನಯದ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’ ಮತ್ತು ‘ಅಂದೊಂದಿತ್ತು ಕಾಲ’ ಬಿಡುಗಡೆಯಾಗಬೇಕಿವೆ. ಇನ್ನು ‘ಚೂಮಂತ್ರ’, ‘ಮಾಫಿಯಾ’ ಚಿತ್ರಗಳ ಜತೆಗೆ ಒಂದು ವೆಬ್​ಸರಣಿಯಲ್ಲಿ ಅವರು ನಟಿಸುತ್ತಿದ್ದಾರೆ. ಇವೆಲ್ಲ ಸೇರಿದರೆ ಚಿತ್ರಗಳ ಸಂಖ್ಯೆ ಎಷ್ಟಾಗುತ್ತದೆ ಎಂದರೆ, ಲೆಕ್ಕ ಹಾಕುವುದು ಮೂರ್ಖತನ ಎನ್ನುತ್ತಾರೆ. ‘ನಾನು ಬಹಳ ಪ್ರಾಕ್ಟಿಕಲ್ ಆಗಿ ಯೋಚಿಸುತ್ತೇನೆ. ಎಲ್ಲರಿಗೂ ಜೀವನದಲ್ಲಿ ಒಂದು ಕಾಲ ಬರುತ್ತದೆ. ಇರಬೇಕು, ಒಳ್ಳೆಯ ಕೆಲಸ ಮಾಡಬೇಕು, ಹೊಸಬರು ಬಂದಾಗ ಜಾಗ ಬಿಟ್ಟುಕೊಟ್ಟು ಹೋಗಬೇಕು. ಪ್ರಪಂಚ ಇರೋದೇ ಹೀಗೆ. ಹಾಗಾಗಿ, ನಾನು ಸಂಖ್ಯೆ ನಂಬುವುದಿಲ್ಲ. ಒಳ್ಳೆಯ ಕೆಲಸ ಮಾತ್ರ ನಂಬುತ್ತೇನೆ’ ಎನ್ನುತ್ತಾರೆ.

    ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts