ಚೆನ್ನೈ: ರಜನಿಕಾಂತ್ ಅವರು ಮಾಸ್ ಸಿನಿಮಾಗಳ ಮೂಲಕ ಫೇಮಸ್ ಆದವರು. ಅವರು ‘ಲಾಲ್ ಸಲಾಂ’ ಸಿನಿಮಾ ಒಪ್ಪಿಕೊಂಡಾಗ ಅನೇಕರಿಗೆ ಅಚ್ಚರಿ ಆಗಿತ್ತು. ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾ ಇಂದು (ಫೆಬ್ರವರಿ 9) ರಿಲೀಸ್ ಆಗಿದೆ. ಈ ಚಿತ್ರವನ್ನು ರಜನಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಶನಿವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್ ಅವರು, ಲಾಲ್ ಸಲಾಂ ಸಿನಿಮಾಗೆ ಜನರಿಂದ ಪ್ರತಿಕ್ರಿಯೆ ಸಿಕ್ಕಿದೆ ಎಂದು ಚಿತ್ರತಂಡ ಹೇಳಿದೆ ಇದು ಖುಷಿ ನೀಡಿದೆ ಎಂದರು.
ಇದೇ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ವೆಟ್ಟೈಯನ್' ಸಿನಿಮಾ ಶೇ.80 ರಷ್ಟು ಮುಕ್ತಾಯವಾಗಿದ್ದು, ಶೇಕಡಾ 20 ರಷ್ಟು ಕೆಲಸ ಪ್ರಗತಿಯಲ್ಲಿದೆ. ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಎಂದು ಹೇಳಿದರು.
ಸೂಪರ್ ಸ್ಟಾರ್ ರಜನಿಕಾಂತ್ ಅವರು ದಣಿವರಿಯದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ನಟಿಸುತ್ತಿರುವ 170ನೇ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ರಜನಿಕಾಂತ್ ಅವರ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಟೈಟಲ್ ಏನು ಎಂಬುದು ರಿವೀಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ವೆಟ್ಟೈಯನ್’ ಎಂದು ಹೆಸರು ಇಡಲಾಗಿದೆ. ಶೀರ್ಷಿಕೆ ಅನಾವರಣ ಮಾಡಲು ಬಿಡುಗಡೆ ಮಾಡಿರುವ ಟೀಸರ್ ಗಮನ ಸೆಳೆಯುತ್ತಿದೆ. ಯೂಟ್ಯೂಬ್ನಲ್ಲಿ 24 ಗಂಟೆ ಕಳೆಯುವುದರೊಳಗೆ 34 ಲಕ್ಷಕ್ಕೂ ಅಧಿಕ ಬಾರಿ ಇದು ವೀಕ್ಷಣೆ ಕಂಡಿದೆ.
ಲಾಲ್ ಸಲಾಂ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯ ಚಿತ್ರವಾಗಿದ್ದು, ಇದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವಿಸ್ತೃತ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ 4.30 ಕೋಟಿ ರೂ. ಗಳಿಸುವಲ್ಲಿ ಸಿನಿಮಾ ಯಶಸ್ವಿ ಆಗಿದೆ. ವಾರಾಂತ್ಯದಲ್ಲಿ ಚಿತ್ರದ ವ್ಯವಹಾರ ಇನ್ನೂ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡಿನ ಚಲನಚಿತ್ರ ಮಂದಿರಗಳಲ್ಲಿ ಶೇ. 30.35 ರಷ್ಟು ಆಕ್ಯುಪೆನ್ಸಿ ಇತ್ತು.
ಇಂದು ಮತ್ತು ನಾಳೆ ಚಿತ್ರಮಂದಿರಗಳಿಗೆ ಹೆಚ್ಚಿನ ಪ್ರೇಕ್ಷಕರು ಆಗಮಿಸುವ ನಿರೀಕ್ಷೆಗಳಿವೆ. ಈ ಹಿನ್ನೆಲೆ ಲಾಲ್ ಸಲಾಂ ತನ್ನ ಮೊದಲ ವಾರಾಂತ್ಯ 6 ರಿಂದ 7 ಕೋಟಿ ರೂ. ಗಳಿಸೋ ಸಾಧ್ಯತೆ ಇದೆ. ಮೊದಲ ವಾರಾಂತ್ಯದಲ್ಲಿ ಚಿತ್ರ 15 ರಿಂದ 20 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ.