ಚೆನ್ನೈ: ರಜನಿಕಾಂತ್ ಅಭಿನಯದ ಚಿತ್ರಗಳಲ್ಲಿ ಜಪಾನ್ನಲ್ಲಿ ಬಿಡುಗಡೆಯಾಗುವುದು, ಅಲ್ಲಿ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇರುವುದು ಹೊಸ ವಿಷಯವೇನಲ್ಲ. ಈಗಾಗಲೇ ರಜನಿಕಾಂತ್ ಅಭಿನಯದ 'ಮುತ್ತು', 'ಪಡೆಯಪ್ಪ', 'ಶಿವಾಜಿ' ಸೇರಿದಂತೆ ಹಲವು ಚಿತ್ರಗಳು ಅಲ್ಲಿ ಬಿಡುಗಡೆಯಾಗಿ ಹಿಟ್ ಆಗಿವೆ. ಇನ್ನು, ರಜನಿಕಾಂತ್ ಅವರ ಜಪಾನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ಹುಡುಕಿಕೊಂಡು ಅಲ್ಲಿಂದ ಚೆನ್ನೈವರೆಗೆ ಬಂದಿದ್ದೂ ಇದೆ.
ಈಗ್ಯಾಕೆ ಈ ವಿಷಯ ಎಂದರೆ, ರಜನಿಕಾಂತ್ ಅವರ ಚಿತ್ರಗಳು ಜಪಾನ್ನಲ್ಲಿ ಸುದ್ದಿ ಮಾಡಿ ಬಹಳ ದಿನಗಳೇ ಆಗಿದ್ದವು. ಇತ್ತೀಚಿನ ಕೆಲವು ವರ್ಷಗಳಲ್ಲಿ ರಜನಿಕಾಂತ್ ಅಭಿನಯದ 'ಲಿಂಗ', 'ಕಬಾಲಿ', 'ಕಾಲಾ', 'ಪೆಟ್ಟ' ಮುಂತಾದ ಚಿತ್ರಗಳು ಬಿಡುಗಡೆಯಾದರೂ ಜಪಾನ್ನಲ್ಲಿ ಯಶಸ್ವಿಯಾದ ಸುದ್ದಿ ಇರಲಿಲ್ಲ. ಈಗ 'ದರ್ಬಾರ್' ಚಿತ್ರವು ಸೂಪರ್ ಹಿಟ್ ಆಗಿದೆ ಎಂದು ಹೇಳಲಾಗುತ್ತಿದೆ.
'ದರ್ಬಾರ್' ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿತ್ತು. ಎ.ಆರ್. ಮುರುಗದಾಸ್ ಅಭಿನಯದ ಈ ಚಿತ್ರ ಭಾರತದಲ್ಲಿ ದೊಡ್ಡ ಹಿಟ್ ಏನೂ ಆಗಿರಲಿಲ್ಲ. ಬಹಳ ವರ್ಷಗಳ ನಂತರ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರವು ತಕ್ಕಮಟ್ಟಿಗೆ ಹಿಟ್ ಆಗಿತ್ತು. ಚಿತ್ರದ ಬಗ್ಗೆ ಅಷ್ಟೇನೂ ಮೆಚ್ಚುಗೆಯ ಮಾತುಗಳು ಕೇಳಿಬರದಿದ್ದರೂ, ಅನಿರುದ್ಧ ಸಂಯೋಜಿಸಿದ್ದ ಹಿನ್ನೆಲೆಯ ಸಂಗೀತದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದವು. ಅದರಲ್ಲೂ ರಜನಿಕಾಂತ್ ಅವರ ಎಂಟ್ರಿಗೆ ಸಂಯೋಜಿಸಲಾಗಿದ್ದ 'ತಲೈವ ಇಂಟ್ರೋ ಬಿಜಿಎಂ' ಅಂತೂ ಅಭಿಮಾನಿಗಳಿಗೆ ಭಾರೀ ಹಿಡಿಸಿತ್ತು.
ಕಾರಣಾಂತರಗಳಿಂದ ಚಿತ್ರವು ಭಾರತದಲ್ಲಿ ಫ್ಲಾಪ್ ಆದರೂ, ಜಪಾನ್ನಲ್ಲಿ ಚಿತ್ರ ದಾಖಲೆಯ ಹಿಟ್ ಆಗಿದೆಯಂತೆ. ಜನ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದು, ಇಷ್ಟು ವರ್ಷಗಳಾದರೂ ರಜನಿಕಾಂತ್ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಈ ಯಶಸ್ಸಿನಿಂದ ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ.