ಸಿನಿವಾಣಿ

ದಾರಿ ತಪ್ಪಿದ್ದ ರಜನಿಕಾಂತ್​ ಬದಲಾಗಿದ್ದು ಯಾರಿಂದ ಗೊತ್ತಾ? ಅವರೇ ಹೇಳಿದ್ದಾರೆ ಕೇಳಿ …

ಚೆನ್ನೈ: ರಜನಿಕಾಂತ್​ ಮಾತನಾಡುವುದು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಚಿತ್ರಗಳ ಸಮಾರಂಭದಲ್ಲಿ ಒಂದಿಷ್ಟು ಮಾತನಾಡಿರುವುದು ಬಿಟ್ಟರೆ, ಅವರು ಬಹಿರಂಗವಾಗಿ ಕಾಣಿಸಿಕೊಂಡಿದ್ದು ಮತ್ತು ಮಾತನಾಡಿದ್ದು ಕಡಿಮೆಯೇ. ಈಗ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗೊತ್ತಿರದ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ತಮ್ಮನ್ನು ಸರಿದಾರಿಗೆ ತಂದಿದ್ದು ಯಾರು, ತಮ್ಮನ್ನು ಬದಲಾಯಿಸಿದ್ದು ಯಾರು ಎಂಬುದರ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅವರು ತಮ್ಮ ಸಂಬಂಧಿ ಮತ್ತು ನಟ ವೈ.ಜಿ. ಮಹೇಂದ್ರನ್​ ಅವರಿಗೆ ಒಂದು ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಶನವು ತಮ್ಮ ವೈಯಕ್ತಿಕ ಜೀವನದ ಕುರಿತು ಹಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.

'ನಾನು ಬಸ್​ ಕಂಡೆಕ್ಟರ್​ ಆಗಿದ್ದ, ಕೆಟ್ಟ ಸಂಗಡದಿಂದ ಸಾಕಷ್ಟು ಹಾದಿ ತಪ್ಪಿದ್ದೆ. ಹಲವು ಕೆಟ್ಟ ಅಭ್ಯಾಸ ನನಗಿತ್ತು. ದಿನಕ್ಕೆ ಎರಡು ಬಾರಿ ಮಟನ್​ ಬೇಕಾಗಿತ್ತು. ದಿನಾ ಕುಡಿಯುತ್ತಿದ್ದೆ. ಅದೆಷ್ಟು ಸಿಗರೇಟ್​ಗಳನ್ನು ಸೇದುತ್ತಿದ್ದೆನೋ ಲೆಕ್ಕ ಇಲ್ಲ. ಸಿನಿಮಾಗೆ ಬಂದ ಮೇಲೆ, ಹಣ ಮತ್ತು ಜನಪ್ರಿಯತೆಯಿಂದ ಈ ಕೆಟ್ಟ ಅಭ್ಯಾಸಗಳು ಇನ್ನೂ ಹೆಚ್ಚಾದವು' ಎಂದು ಮುಚ್ಚೂಮರೆ ಇಲ್ಲದೆ ಹೇಳಿಕೊಂಡಿದ್ದಾರೆ ರಜನಿಕಾಂತ್.

'ದಿನ ಬೆಳಿಗ್ಗೆ ನನಗೆ ಮಟನ್, ಚಿಕನ್​ ಬೇಕಾಗಿತ್ತು. ಸಸ್ಯಹಾರಿಗಳನ್ನು ಕಂಡರೆ ಕೀಳಾಗಿ ನೋಡುತ್ತಿದ್ದೆ. ನಿಜ ಹೇಳಬೇಕೆಂದರೆ, ಸಿಗರೇಟ್​, ಮದ್ಯ ಮತ್ತು ಮಾಂಸ ಹಾನಿಕಾರಕ. ಯಾವುದೇ ಲಿಮಿಟ್​ ಇಲ್ಲದಿದ್ದರೆ 60 ವರ್ಷಗಳ ಮೇಲೆ ಬದುಕೋದು ಕಷ್ಟ. 60ರ ಒಳಗೆ ನಿಧನರಾಗಿರುವವರ ಹಲವು ಉದಾಹರಣೆಗಳು ನಮ್ಮ ನಡುವೆ ಇದೆ. ಆದರೆ, ಇದೆಲ್ಲದರಿಂದ ನಾನು ದೂರವಾಗಿದ್ದು ನನ್ನ ಹೆಂಡತಿಯಿಂದ. ಈಗ ನನಗೆ 73 ವರ್ಷ. ಆಕೆಯಿಂದಾಗಿ ನನ್ನ ಆರೋಗ್ಯ ಚೆನ್ನಾಗಿದೆ. ಆಕೆ ತನ್ನ ಪ್ರೀತಿಯಿಂದ ನನ್ನನ್ನು ಬದಲಾಯಿಸಿದಳು' ಎಂದು ಹೇಳಿಕೊಂಡಿದ್ದಾರೆ.

ರಜನಿಕಾಂತ್​ ಮತ್ತು ಲತಾ ಅವರ ಮದುವೆ ಮಾಡಿಸಿದ್ದು ಅದೇ ವೈ.ಜಿ. ಮಹೇಂದ್ರನ್​. ಹಾಗಾಗಿ, ಮಹೇಂದ್ರನ್​ ಅವರಿಗೆ ಧನ್ಯವಾದ ಸಲ್ಲಿಸುವುದನ್ನು ರಜನಿಕಾಂತ್​ ಮರೆತಿಲ್ಲ.