ಚೆನ್ನೈ: ರಕ್ತದೊತ್ತಡದ ತೀವ್ರ ಏರುಪೇರಿನಿಂದಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ಸ್ಟಾರ್ ರಜಿನಿಕಾಂತ್ ಅವರು ಇಂದು ಸಂಜೆ (ಡಿ.26) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ನಿನ್ನೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ರಜಿನಿಕಾಂತ್ ದಾಖಲಾಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದು, ಇಂದು ಸಂಜೆ ಡಿಸ್ಚಾರ್ಜ್ ಆಗಲಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ರಜಿನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ರಜಿನಿ ಚೇತರಿಕೆ ಸುದ್ದಿ ಸಂತಸ ತಂದಿದೆ. ಸಾಕಷ್ಟು ಸಿನಿ ಕಲಾವಿದರು ಸಹ ರಜಿನಿ ಚೇತರಿಕೆ ಹಾರೈಸಿದ್ದರು.
ಅಂದಹಾಗೆ ರಜಿನಿಕಾಂತ್ ಅವರು ತಮ್ಮ ಅಭಿನಯದ ‘ಅಣ್ಣಾತ್ತೆ’ ಚಿತ್ರತಂಡದ ನಾಲ್ವರಲ್ಲಿ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಜಿನಿಕಾಂತ್ ಪ್ರತ್ಯೇಕವಾಗಿದ್ದರು. ರಕ್ತದೊತ್ತಡದಲ್ಲಿ ಏರಿಳಿತದ ಸಮಸ್ಯೆಯಿಂದ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರವಷ್ಟೇ ರಜಿನಿ ಅವರಿಗೆ ಕರೊನಾ ನೆಗಿಟಿವ್ ವರದಿಯಾಗಿತ್ತು.
ರಜನಿಕಾಂತ್ ಅವರು ‘ಅಣ್ಣಾತ್ತೆ’ ಚಿತ್ರವನ್ನು ಜನವರಿ 12ರೊಳಗೆ ಮುಗಿಸಬೇಕು ಎಂದು ಪ್ಲಾನ್ ಹಾಕಿಕೊಂಡಿದ್ದರು. ಅದಕ್ಕಾಗಿ ಕಳೆದ ಕೆಲವು ದಿನಗಳಿಂದ, ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಚಿತ್ರೀಕರಣ ಸಹ ಸಾಕಷ್ಟು ಮುಗಿದಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ, ಚಿತ್ರತಂಡದ ನಾಲ್ವರಿಗೆ ಕರೊನಾ ಪಾಸಿಟಿವ್ ಬಂದಿರುವುದರಿಂದ ಚಿತ್ರೀಕರಣ ಅನಿವಾರ್ಯವಾಗಿ ಮುಂದಕ್ಕೆ ಹೋಗಿದೆ.
ಇಷ್ಟಕ್ಕೂ ರಜನಿಕಾಂತ್ ಅವರಿಗೆ ತುರ್ತಾಗಿ ಚಿತ್ರ ಮುಗಿಸುವುದಕ್ಕೂ ಒಂದು ಕಾರಣವಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ರಜನಿಕಾಂತ್ ಅವರ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಯೋಚನೆ. ಆದರೆ, ಇದೀಗ ಚಿತ್ರ ಮುಗಿಯುವುದು ಇನ್ನಷ್ಟು ತಡವಾಗಲಿದೆ.
‘ಅಣ್ಣಾತ್ತೆ’ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ಮುಂತಾದವರು ನಟಿಸುತ್ತಿದ್ದು, ಶಿವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್)