ಬೆಂಗಳೂರು: ರಮ್ಯಾ ನಿರ್ಮಾಣದ 'ಸ್ವಾತಿಮುತ್ತಿನ ಮಳೆ ಹನಿಯೇ' ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗದಲೇ ಚಿತ್ರಕ್ಕೊಂದು ಸಂಕಷ್ಟ ಎದುರಾಗಿದೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ಶೀರ್ಷಿಕೆಯನ್ನು ನೀಡಬಾರದು ಎಂದು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನೊಟೀಸ್ ನೀಡಿದ್ದಾರೆ.
ಹೌದು, 'ಸ್ವಾತಿಮುತ್ತಿನ ಮಳೆ ಹನಿಯೇ' ಶೀರ್ಷಿಕೆ ಬಳಸಿಕೊಳ್ಳುವುದಕ್ಕೆ ರಮ್ಯಾಗೆ ಇದೀಗ ಸಮಸ್ಯೆ ಎದುರಾಗಿದೆ. ಈ ಕುರಿತು ತಮ್ಮ ವಕೀಲರ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಬಾಬು ಅವರು ತಮ್ಮ ವಕೀಲ ಎಸ್.ಆರ್. ಶ್ರೀನಿವಾಸ್ ಮೂರ್ತಿ ಮೂಲಕ ನೊಟೀಸ್ ನೋಟೀಸ್ ನೀಡಿದ್ದಾರೆ. ಶೀರ್ಷಿಕೆ ನೀಡಿದರೆ ಕೃತಿ ಚೌರ್ಯವಾಗುತ್ತೆ ಎಂದು ಉಲ್ಲೇಖಿಸಿದ್ದಾರೆ.
'ಸ್ವಾತಿಮುತ್ತಿನ ಮಳೆ ಹನಿಯೇ' ಎಂಬ ಶೀರ್ಷಿಕೆಯು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಬಣ್ಣದ ಗೆಜ್ಜೆ' ಚಿತ್ರದ 'ಸ್ವಾತಿಮುತ್ತಿನ ಮಳೆ ಹನಿಯೇ' ಎಂಬ ಹಾಡಿನಿಂದ ಸ್ಫೂರ್ತಿಪಡೆದಿದೆ. ಅದೇ ಕಾರಣಕ್ಕೆ, ಆ ಶೀರ್ಷಿಕೆಯನ್ನು ಇಡುವುದಕ್ಕೆ ರಾಜೇಂದ್ರ ಸಿಂಗ್ ಬಾಬು ವಿರೋಧ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ರಮ್ಯಾ, ರಾಜ್ ಬಿ. ಶೆಟ್ಟಿ ನಿರ್ದೇಶನದ 'ಸ್ವಾತಿಮುತ್ತಿನ ಮಳೆ ಹನಿಯೇ' ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಈ ಕುರಿತು ಘೋಷಣೆಯೂ ಆಗಿತ್ತು ಆದರೆ, ಹೊಸಬರ ಚಿತ್ರಗಳನ್ನು ನಿರ್ಮಿಸುವುದಕ್ಕೆ ಹುಟ್ಟುಹಾಕಿರುವ ಸಂಸ್ಥೆಯಾದ್ದರಿಂದ, ಆ ಚಿತ್ರದಲ್ಲಿ ಹೊಸಬರು ಇರುತ್ತಾರೆ, ತಾನು ಇನ್ನೊಂದು ಚಿತ್ರದ ಮೂಲಕ ಬರುವುದಾಗಿ ರಮ್ಯಾ ಹೇಳಿಕೊಂಡಿದ್ದರು. ಆ ನಂತರ ಅವರ ಜಾಗಕ್ಕೆ ಸಿರಿ ರವಿಕುಮಾರ್ ಬಂದಿದ್ದರು
ಇದಾದ ನಂತರ ಅವರು 'ಉತ್ತರಕಾಂಡ' ಎಂಬ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ರೀಎಂಟ್ರಿ ಕೊಟ್ಟಿದ್ದರು. ಇನ್ನೇನು ತಮ್ಮ ನಿರ್ಮಾಣದ ಚಿತ್ರವನ್ನು ಮುಗಿಸಿ, ಬಿಡುಗಡೆ ಮಾಡುವಷ್ಟರಲ್ಲಿ ಇಂಥದ್ದೊಂದು ಸಂಕಷ್ಟ ಎದುರಾಗಿದೆ. ಈ ಪ್ರಕರಣವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಗೆ ಬಗೆಹರಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.