ಸಿನಿವಾಣಿ

ಆಲಿಯಾ ಬದ್ಲಾಗಲ್ಲ ... ರಾಜಮೌಳಿ ಮಹತ್ವದ ತೀರ್ಮಾನ

ಬಾಲಿವುಡ್​ ನಟಿ ಆಲಿಯಾ ಭಟ್​ ಬಗ್ಗೆ ಜನರಲ್ಲಿ ಇಷ್ಟೊಂದು ಆಕ್ರೋಶವಿದೆಯಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಕಾರಣ, ಆಲಿಯಾ ಅಭಿನಯದ 'ಸಡಕ್​ 2' ಚಿತ್ರಕ್ಕೆ ಪ್ರೇಕ್ಷಕರಿಂದ ಒಂದೇ ಸಮನೆ ಡಿಸ್ಲೈಕ್​ಗಳು ಸಿಗುತ್ತಿರುವುದು. ಈಗಾಗಲೇ ಚಿತ್ರಕ್ಕೆ ಒಂದು ಕೋಟಿಗೂ ಹೆಚ್ಚು ಡಿಸ್ಲೈಕ್​ಗಳು ಸಿಕ್ಕಿದ್ದು, ಭಾರತೀಯ ಚಿತ್ರರಂಗದಲ್ಲಿ ಒಂದು ಚಿತ್ರದ ಟ್ರೈಲರ್​ಗೆ ಇಷ್ಟೊಂದು ಡಿಸ್ಲೈಕ್​ ಸಿಕ್ಕಿದ್ದು, ಹೊಸ ದಾಖಲೆಯಾಗಿದೆ.

ಇದರಿಂದಾಗಿ ಬೇರೆ ನಿರ್ಮಾಪಕರಲ್ಲಿ ಒಂದು ಭಯ ಶುರುವಾಗಿದೆ. ಆಲಿಯಾ ನಟಿಸಿದ್ದಾರೆ ಎಂಬ ಕಾರಣಕ್ಕೆ ನಾಳೆ ನಮ್ಮ ಚಿತ್ರಗಳಿಗೂ ಇಷ್ಟೊಂದು ಡಿಸ್ಲೈಕ್​ಗಳು ಸಿಕ್ಕರೆ ಹೇಗೆ, ವಿನಾಕಾರಣ ಜನ ತಮ್ಮ ಚಿತ್ರವನ್ನು ತಿರಸ್ಕರಿಸಿದರೆ ಮುಂದೇನು ಕಥೆ ಎಂದು ಆಲಿಯಾ ಅಭಿನಯದ ಚಿತ್ರಗಳ ನಿರ್ಮಾಪಕರ ಪ್ರಶ್ನೆಯಾಗಿದೆ. ಅಷ್ಟೇ ಅಲ್ಲ, ಆಲಿಯಾ ಜತೆಗೆ ಚಿತ್ರ ಮಾಡುವುದಕ್ಕೆ ಮುಂದಾಗಿದ್ದವರು, ಈಗ ಚಿತ್ರವನ್ನು ಮುಂದುವರೆಸಬೇಕಾ ಎಂಬ ಯೋಚನೆಯಲ್ಲಿದ್ದಾರೆ.

ಆದರೆ, ನಿರ್ದೇಶಕ ರಾಜಮೌಳಿ ಮಾತ್ರ ತಮ್ಮ 'ಆರ್​ಆರ್​ಆರ್​' ಚಿತ್ರದಿಂದ ಯಾವುದೇ ಕಾರಣಕ್ಕೂ ತಮ್ಮ ಚಿತ್ರದಿಂದ ಆಲಿಯಾ ಅವರನ್ನು ಕೈಬಿಡದಿರಲು ತೀರ್ಮಾನಿಸದ್ದಾರೆ. ಎಲ್ಲರಿಗೂ ಗೊತ್ತಿರುವಂತೆ, 'ಆರ್​ಆರ್​ಆರ್​' ಚಿತ್ರದಲ್ಲಿ ರಾಮ್​ಚರಣ್​ ತೇಜ ಎದುರು ಆಲಿಯಾ ಭಟ್​ ನಾಯಕಿಯಾಗಿ ನಟಿಸಬೇಕಿತ್ತು. 'ಸಡಕ್​ 2' ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಎಲ್ಲಿ ರಾಜಮೌಳಿ ಸಹ ಆಲಿಯಾ ಅವರನ್ನು ತಮ್ಮ ಚಿತ್ರದಿಂದ ಕೈಬಿಡುತ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.

ಆದರೆ, ರಾಜಮೌಳಿ ಮಾತ್ರ ಯಾವುದೇ ಕಾರಣಕ್ಕೂ ತಮ್ಮ ಚಿತ್ರದಿಂದ ಆಲಿಯಾ ಅವರನ್ನು ಕೈಬಿಡುವುದಿಲ್ಲ ಮತ್ತು ಆಕೆಯನ್ನೇ ನಾಯಕಿಯನ್ನಾಗಿ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಆ ಪಾತ್ರಕ್ಕೆ ಆಲಿಯಾ ಸೂಕ್ತವಾಗಿ ಹೊಂದುವುದರಿಂದ, ಆಕೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬುದು ರಾಜಮೌಳಿ ತೀರ್ಮಾನ.

ಅಲ್ಲದೆ ಇದಕ್ಕೆ ಇನ್ನೂ ಒಂದು ಕಾರಣವಿದೆ. ಏನೆಂದರೆ, 'ಆರ್​ಆರ್​ಆರ್​' ಚಿತ್ರ ಬಿಡುಗಡೆಯಾಗುವುದಕ್ಕೆ ಏನಿಲ್ಲವೆಂದರೂ ಒಂದೂವರೆ ವರ್ಷ ಬೇಕು. ಈಗ ಚಿತ್ರ ಸಾಗುತ್ತಿರುವ ರೀತಿ ನೋಡಿದರೆ, ಚಿತ್ರ ಬಿಡುಗಡೆಯಾಗುವುದೇನಿದ್ದರೂ 2022ರ ಸಂಕ್ರಾಂತಿ. ಅದಕ್ಕೆ ಸಾಕಷ್ಟು ಸಮಯವಿರುವುದರಿಂದ, ಅಷ್ಟರಲ್ಲಿ ಜನರಿಗೆ ಸಹಜವಾಗಿಯೇ ಆಲಿಯಾ ಬಗ್ಗೆ ಆಕ್ರೋಶ ಕಡಿಮೆಯಾಗಿರುತ್ತದೆ.

ಮೇಲಾಗಿ 'ಆರ್​ಆರ್​ಆರ್​', ಆಲಿಯಾ ಒಬ್ಬರನ್ನೇ ನಂಬಿಕೊಂಡು ಕೂತಿಲ್ಲ. ಅಲ್ಲಿ ಜ್ಯೂನಿಯರ್​ ಎನ್​.ಟಿ.ಆರ್​, ರಾಮ್​ಚರಣ್​ ತೇಜ ಇದ್ದಾರೆ. ಅಜಯ್​ ದೇವಗನ್​ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜಮೌಳಿ ಅವರ ಹೆಸರಿದೆ. ಇಷ್ಟೆಲ್ಲಾ ಪ್ಲಸ್​ಗಳು ಇರುವುದರಿಂದ, ಆಲಿಯಾ ಚಿತ್ರದಲ್ಲಿ ನಟಿಸುವುದು ಮೈನಸ್​ ಆಗುವುದಿಲ್ಲ ಎಂಬುದು ರಾಜಮೌಳಿ ಲೆಕ್ಕಾಚಾರ. ಅದೇ ಕಾರಣಕ್ಕೆ ಅವರನ್ನು ಮುಂದುವರೆಸುವುದಕ್ಕೆ ರಾಜಮೌಳಿ ತೀರ್ಮಾನಿಸಿದ್ದಾರೆ.