ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸಿಂಪಲ್ ಸುನಿ ನಿರ್ದೇಶಿಸುತ್ತಿರುವ, ವಿನಯ್ ರಾಜಕುಮಾರ್ ನಾಯಕನಾಗಿರುವ ಚಿತ್ರ ‘ಒಂದು ಸರಳ ಪ್ರೇಮಕಥೆ’. ಈ ಕನ್ನಡ ಚಿತ್ರದ ಮೂಲಕ ಹಿಂದಿ ಕಿರುತೆರೆಯ ಹೆಸರಾಂತ ನಟಿ ಮಲ್ಲಿಕಾ ಸಿಂಗ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ‘ರಾಧಾಕೃಷ್ಣ’ ಧಾರಾವಾಹಿಯಲ್ಲಿ ರಾಧೆಯ ಪಾತ್ರದಲ್ಲಿ ಮಿಂಚಿರುವ ಮಲ್ಲಿಕಾ ‘ಒಂದು ಸರಳ ಪ್ರೇಮಕಥೆ’ಯಲ್ಲಿ ಮಧುರ ಎಂಬ ಗಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ : 13 MOVIE REVIEW ; ಭಾವೈಕ್ಯತೆ ಸಾರುವ ಭಾವೋದ್ವೇಗದ ಕಥೆ
ಶುಕ್ರವಾರ (ಸೆ. 15) ಹುಟ್ಟುಹಬ್ಬ ಆಚರಿಸಿಕೊಂಡ ಅವರಿಗೆ ಸಿಂಪಲ್ ಸುನಿ ಮತ್ತು ತಂಡ ಒಂದು ವಿರಳ ಪ್ರೋಮೋ ಮೂಲಕ ಮಲ್ಲಿಕಾ ಪಾತ್ರವನ್ನು ಪರಿಚಯಿಸಿದ್ದಾರೆ. ಸಂಗೀತ ನಿರ್ದೇಶಕನ ಪಾತ್ರದಲ್ಲಿ ವಿನಯ್ ರಾಜಕುಮಾರ್ ನಟಿಸುತ್ತಿದ್ದು, ಅವರ ಮತ್ತು ಕನ್ನಡ ಮಾತನಾಡಲು ಬಾರದ, ಆದರೆ ಚೆನ್ನಾಗಿ ಹಾಡಬಲ್ಲ ಯುವ ಗಾಯಕಿ ಮಧುರ ನಡುವಿನ ಸಂಭಾಷಣೆ ಈ ವಿಡಿಯೋ ಹೈಲೈಟ್. ಜತೆಗೆ ‘ಇಷ್ಟ್ ಕನ್ನಡ ಬಂದರೆ ಸಾಕು ಮನೆಯಲ್ಲಿ ಸೊಸೆ ಮಾಡಿಕೊಳ್ತಾರೆ’ ಎಂಬ ಡೈಲಾಗ್ ಈಗಾಗಲೇ ಜಾಲತಾಣದಲ್ಲಿ ವೈರಲ್ ಆಗಿದೆ.
‘ಒಂದು ಸರಳ ಪ್ರೇಮಕಥೆ’ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ, ಸಬಾ ಕುಮಾರ್ ಮತ್ತು ಕಾರ್ತಿಕ್ ಶರ್ಮಾ ಛಾಯಾಗ್ರಹಣ ಹಾಗೂ ಆದಿ ಸಂಕಲನವಿರಲಿದೆ.