More

    Tatsama Tadbhava Movie Review: ಮೆದುಳಿಗೆ ಕೆಲಸ ಕೊಡುವ ಚಿತ್ರ-ಕಥೆ

    ಚಿತ್ರ: ತತ್ಸಮ ತದ್ಭವ
    ನಿರ್ದೇಶನ: ವಿಶಾಲ್ ಆತ್ರೇಯ
    ನಿರ್ಮಾಣ: ಪನ್ನಗಾಭರಣ
    ತಾರಾಗಣ: ಮೇಘನಾ ರಾಜ್ ಸರ್ಜಾ, ಪ್ರಜ್ವಲ್ ದೇವರಾಜ್, ಬಾಲಾಜಿ ಮನೋಹರ್, ಅರವಿಂದ್ ಅಯ್ಯರ್, ಟಿ.ಎಸ್ ನಾಗಭಾರಣ ಮುಂತಾದವರು
    ಸ್ಟಾರ್: 3

    | ಪ್ರಮೋದ ಮೋಹನ ಹೆಗಡೆ

    ನಟಿ ಮೇಘನಾ ರಾಜ್ ಬ್ರೇಕ್‌ನ ಬಳಿಕ ಬೆಳ್ಳಿ ಪರದೆಗೆ ವಾಪಸ್ಸಾಗಿರುವ ಸಿನಿಮಾ ‘ತತ್ಸಮ ತದ್ಭವ’. ಚಿತ್ರ ನೋಡಿದ ಬಳಿಕ ಒಂದೊಳ್ಳೆಯ ಸಿನಿಮಾ ಮೂಲಕವೇ ಕಂಬ್ಯಾಕ್ ಮಾಡಿದ್ದಾರೆನ್ನಬಹುದು. ನೇರವಾಗಿ ಚಿತ್ರದ ಕಥೆಯ ಬಗ್ಗೆ ಹೇಳುತ್ತೇನೆ. ‘ಯಾವುದೇ ಕ್ರೈಂ ಹಿಂದೆ ಎರಡು ಮೈಂಡ್ ಕೆಲಸ ಮಾಡುತ್ತದೆ. ಒಂದು ಶಕ್ತಿಯುತವಾದದ್ದು. ಮತ್ತೊಂದು ದುರ್ಬಲವಾದದ್ದು. ಶಕ್ತಿಯುತವಾದ ಮನಸ್ಸನ್ನು ಹಿಂದೆ ತಳ್ಳಿ, ದುರ್ಬಲ ಮನಸ್ಸು ಮುಂದೆ ಬಂದಾಗ ನಿಜಾಂಶ ಬೆಳಕಿಗೆ ಬರುತ್ತದೆ’ ಎಂಬ ಮಾತನ್ನು ಪೊಲೀಸ್ ಅಧಿಕಾರಿ ಅರವಿಂದ್ ಅಶ್ವತ್ಥಾಮ (ಪ್ರಜ್ವಲ್ ದೇವರಾಜ್) ಹೇಳುತ್ತಾನೆ. ಇದೇ ಚಿತ್ರದ ಒನ್‌ಲೈನ್. ಏಕೆಂದರೆ ಒಂದು ಇನ್ವೆಸ್ಟಿಗೇಷನ್ ಸುತ್ತ ಚಿತ್ರದ ಕಥೆಯನ್ನು ಹೆಣೆದಿದ್ದಾರೆ ನಿರ್ದೇಶಕ ವಿಶಾಲ್ ಆತ್ರೇಯ.

    ಆರಿಕಾ (ಮೇಘನಾ) ಪತಿ ಕಳೆದು ಹೋಗಿದ್ದಾರೆ ಎಂದು ಅರವಿಂದ್ ಬಳಿ ದೂರು ನೀಡುವುದರಿಂದ ಕಥೆ ಶುರುವಾಗುತ್ತದೆ. ಈ ಪ್ರಕರಣವನ್ನು ಬೆನ್ನತ್ತಿ ಹೋಗುವ ಅರವಿಂದ್‌ಗೆ ಹೊಸ ಹೊಸ ತಿರುವುಗಳು, ಸವಾಲುಗಳು ಎದುರಾಗುತ್ತವೆ. ಈ ಕಗ್ಗಂಟನ್ನು ಬಿಡಿಸುವುದೇ ‘ತತ್ಸಮ ತದ್ಭವ’. ಇದು ಕೇವಲ ಕ್ರೈಂ ಅಥವಾ ಸಸ್ಪೆನ್ಸ್ ಸಿನಿಮಾ ಅಲ್ಲ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್. ಹೀಗಾಗಿ ಪ್ರತಿಯೊಂದು ಸನ್ನಿವೇಶವನ್ನು ಗಮನವಿಟ್ಟು ನೋಡಬೇಕಾಗಿರುವುದು ಪ್ರೇಕ್ಷಕನ ಕರ್ತವ್ಯ ಹಾಗೂ ತಾಳ್ಮೆಯೂ ಬೇಕು. ಇಲ್ಲಿ ಮೆದುಳಿಗೆ ಕೆಲಸ ಜಾಸ್ತಿ. ಅಲ್ಲಲ್ಲಿ ಈ ಸಿನಿಮಾ 2016ರಲ್ಲಿ ಬಿಡುಗಡೆಯಾದ ಇಂಗ್ಲಿಷ್‌ನ ‘ಸ್ಪ್ಲಿಟ್’ ಸಿನಿಮಾ ನೆನಪಿಸಿದರೂ, ಇದು ಇದರದ್ದೇ ಶೈಲಿಯಲ್ಲಿ ಭಿನ್ನವಾಗಿ ನಿಲ್ಲುತ್ತದೆ. ವಿಶೇಷವಾಗಿ ಚಿತ್ರದಲ್ಲಿ ಗಮನ ಸೆಳೆಯುವ ಅಂಶ ಎಂದರೆ ಅದು ಚಿತ್ರಕಥೆ. ಅಚ್ಚುಕಟ್ಟಾಗಿ ಕುತೂಹಲಕಾರಿಯಾಗಿ ನಿರೂಪಿಸಲಾಗಿದೆ.

    ನಟಿ ಮೇಘನಾ ರಾಜ್ ಸರ್ಜಾ ವಿಭಿನ್ನ ಶೇಡ್‌ನಲ್ಲಿ ಮಿಂಚಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಷ್ಟೇ ವಿಭಿನ್ನವಾಗಿ ಪ್ರಜ್ವಲ್ ದೇವರಾಜ್ ಪಾತ್ರವಾಗಿದ್ದು, ಇಷ್ಟವಾಗುತ್ತಾರೆ. ಪೊಲೀಸ್ ಎಂದ ಮಾತ್ರಕ್ಕೆ ಎಲ್ಲಿಯೂ ಅತಿಯಾದ ಡೈಲಾಗ್‌ಗಳು ಅಥವಾ ಅನವಶ್ಯಕ ೈಟ್ ಸನ್ನಿವೇಶಗಳಿಲ್ಲ. ಇದು ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲೊಂದು. ಚಿತ್ರಕ್ಕೆ ಪೂರಕವಾದ ಸಂಗೀತ ಹಾಗೂ ಒಂದೊಳ್ಳೆಯ ಜೋಗುಳ ಗೀತೆಯನ್ನು ಸಂಯೋಜಿಸಿದ್ದಾರೆ ವಾಸುಕಿ ವೈಭವ್. ಬಾಲಾಜಿ ಮನೋಹರ್, ಗಿರಿಜಾ ಲೋಕೇಶ್, ಅರವಿಂದ್ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಇಷ್ಟಪಡುವವರಿಗೆ ‘ತತ್ಸಮ ತದ್ಭವ’ ಒಂದೊಳ್ಳೆ ಆಯ್ಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts