ಬೆಂಗಳೂರು: ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಿಜಿಯಾಗಿದ್ದಾರೆ. ಒಂದಾದ ನಂತರ ಒಂದು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದೆಲ್ಲದರ ಜತೆಗೆ ಹೊಸಬರ ಹೊಸ ಪ್ರಯತ್ನಗಳಿಗೂ ಅವರು ಕೈ ಜೋಡಿಸುತ್ತಿದ್ದಾರೆ. ಈಗ ಅಂಥದ್ದೇ ಮತ್ತೊಂದು ಹೊಸ ಸಿನಿಮಾವೊಂದಕ್ಕೆ ರಚಿತಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರಕ್ಕೆ ರಚಿತಾ ನಾಯಕಿ. ನಾಯಕಿ ಹಿನ್ನೆಲೆಯಲ್ಲಿಯೇ ಸಾಗುವ ಈ ಚಿತ್ರವನ್ನು ಅರುಣ್ ಕುಮಾರ್ ಮತ್ತು ಸಾಬು ಅಲೋಯಿಸಿಸ್ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಕನ್ನಡದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿರುವ ಲೈಫ್ ಈಸ್ ಬ್ಯೂಟಿಫುಲ್ ಚಿತ್ರವನ್ನೂ ಈ ನಿರ್ದೇಶಕ ಜೋಡಿಯೇ ಆ್ಯಕ್ಷನ್ ಕಟ್ ಹೇಳುತ್ತದೆ.
ಇದನ್ನೂ ಓದಿ: ನಾವಿಬ್ರು ಮದ್ವೆಯಾಗೋಣ ನಾಗಚೈತನ್ಯಗೆ ಡಿವೋರ್ಸ್ ಕೊಡಿ ಎಂದ ಫ್ಯಾನ್: ಸಮಂತಾ ಉತ್ತರಕ್ಕೆ ಭಾರಿ ಮೆಚ್ಚುಗೆ!
ಸರ್ವೈವಲ್ ಶೈಲಿಯ ಸಿನಿಮಾ ಇದಾಗಿರಲಿದೆ ಎಂದು ಮಾಹಿತಿ ನೀಡುವ ನಿರ್ಮಾಪಕ ಲೋಹಿತ್, ‘ಈ ರೀತಿಯ ಸಿನಿಮಾ ಕನ್ನಡದಲ್ಲಿ ಇಲ್ಲಿಯವರೆಗೂ ಮೂಡಿಬಂದಿಲ್ಲ. ಹೊಸದಾದ ಶೈಲಿಯನ್ನು ಪರಿಚಯಿಸುತ್ತಿದ್ದೇವೆ. ಭಾವನಾತ್ಮಕವಾದ ಎಳೆ ಇಲ್ಲಿರಲಿದೆ’ ಎನ್ನುತ್ತಾರೆ.
ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಕೊನೇ ಹಂತದಲ್ಲಿದೆಯಂತೆ. ಇತ್ತ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದ ಶೂಟಿಂಗ್ ಇನ್ನೆರಡು ದಿನ ಮುಗಿದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ. ಆ ಬಳಿಕ ರಚಿತಾ ಅವರ ಡೇಟ್ಸ್ ನೋಡಿಕೊಂಡು, ಸಿನಿಮಾ ಶುರು ಮಾಡುವುದು ತಂಡದ ಪ್ಲಾನ್.
ಇದನ್ನೂ ಓದಿ: 2050ರಲ್ಲಿ ಶ್ರದ್ಧಾ ಏನ್ ಮಾಡ್ತಾರೆ ಗೊತ್ತಾ?
ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾದ ತಂಡವೇ ಈ ಚಿತ್ರದಲ್ಲಿ ಮುಂದುವರಿದಿದ್ದು, ಪ್ರೈಡೇ ಫಿಲಂಸ್ನ ಲೋಹಿತ್ , ಸಿಲ್ವರ್ ಟ್ರೇನ್ ಎಂಟರ್ಟೈನ್ಮೆಂಟ್ನ ಬಿಜಿ ಅರುಣ್, ಕಿಶೋರ್ ನರಸಿಂಹಯ್ಯ ಹೊಸ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. 1500ಕ್ಕೂ ಅಧಿಕ ಆ್ಯಡ್ ಫಿಲಂ ಮಾಡಿದ ಕೇರಳ ಮೂಲದ ಕ್ರಿಶ್ ಕೈಮಲ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನುಳಿದಂತೆ ಪಾತ್ರಗಳ ಆಯ್ಕೆ ಮತ್ತು ತಾಂತ್ರಿಕ ವರ್ಗದ ಆಯ್ಕೆ ಆಗಬೇಕಿದೆ.