ಬೆಂಗಳೂರು: ಕನ್ನಡ ಚಿತ್ರರಂಗದ ಸದ್ಯದ ಬೇಡಿಕೆಯ ನಟಿಯರಲ್ಲಿ ರಚನಾ ಇಂದರ್ ಸಹ ಒಬ್ಬರು. ನಿನ್ನೆ ಶುಕ್ರವಾರ (ನ.25) ಬಿಡುಗಡೆಯಾದ 'ತ್ರಿಬಲ್ ರೈಡಿಂಗ್' ಸೇರಿದಂತೆ ರಚನಾ ಅಭಿನಯದ ನಾಲ್ಕು ಚಿತ್ರಗಳು ಈ ವರ್ಷ ಬಿಡುಗಡೆಯಾಗಿದೆ. ಈ ಮಧ್ಯೆ, ಅವರು 'ನಾಟ್ ಔಟ್' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ನರ್ಸ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಎ.ಪಿ. ಅರ್ಜುನ್ ನಿರ್ದೇಶನದ 'ಕಿಸ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರವಿಕುಮಾರ್, ಈ ಚಿತ್ರವನ್ನು ತಮ್ಮ ರಾಷ್ಟ್ರಕೂಟ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರ ಮಗ ಅಜಯ್ ಪೃಥ್ವಿ ಹೀರೋ. ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಈ ಚಿತ್ರವನ್ನು ಅಂಬರೀಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಕುರಿತು ವಿವರಿಸುವ ಅವರು, 'ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪೇ 'ನಾಟ್ ಔಟ್'. ಪ್ರತಿ ಆಟದಲ್ಲೂ ಒಬ್ಬ ಅಂಪೈರ್ ಇರುತ್ತಾರೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರುತ್ತಾನೆ. ಹುಲಿ - ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತದೆ. ಕುರಿಗಳು ಬೆಟ್ಟವನ್ನು ಹತ್ತುವಾಗ ಮೇಲಿರುವ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳನ್ನು ಇಲ್ಲಿ ಚಿತ್ರದಲ್ಲಿ ನೋಡಬಹುದು' ಎನ್ನುತ್ತಾರೆ.
ಅಜಯ್ ಪೃಥ್ವಿ ಮತ್ತು ರಚನಾ ಇಂದರ್ ಜತೆಗೆ ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆದಿದೆ.
'ನಾಟ್ ಔಟ್' ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಹಾಲೇಶ್ ಛಾಯಾಗ್ರಹಣವಿದೆ.