ಸಿನಿವಾಣಿ

ಲವ್ 360 ಚಿತ್ರಕ್ಕೆ ರಚನಾ ನಾಯಕಿ; ಶಶಾಂಕ್ ಚಿತ್ರಕ್ಕೆ ಹೀರೋಯಿನ್ ಸಿಕ್ಕಳು

ಬೆಂಗಳೂರು: ‘ತಾಯಿಗೆ ತಕ್ಕ ಮಗ’ ಸಿನಿಮಾ ಬಳಿಕ ‘ಲವ್ 360’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಮತ್ತೆ ನಿರ್ಮಾಣ ಮತ್ತು ನಿರ್ದೇಶನಕ್ಕೆ ಮರಳಿದ್ದಾರೆ ಶಶಾಂಕ್. ಪ್ರವೀಣ್ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸುತ್ತಿರುವ ಶಶಾಂಕ್, ನಾಯಕಿಯನ್ನಾಗಿ ರಚನಾ ಇಂದರ್ ಅವರನ್ನು ಆಯ್ದುಕೊಂಡಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ‘ಲವ್ 360’ ಸಿನಿಮಾ ಪ್ರೇಮಕಥೆಯ ಹಿನ್ನೆಲೆಯ ಚಿತ್ರ. ಅದರಲ್ಲೂ ಶಶಾಂಕ್ ಸಿನಿಮಾ ಅಂದರೆ ಅಲ್ಲಿ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ. ಅದು ಅವರ ಈ ಹಿಂದಿನ ಸಿನಿಮಾಗಳಲ್ಲಿ ಸಾಬೀತಾಗಿದೆ. ಇದೀಗ ಈ ಚಿತ್ರಕ್ಕೆ ಫ್ರೆಶ್ ಜೋಡಿಯನ್ನೇ ಆಯ್ದುಕೊಂಡಿದ್ದಾರೆ. ಇನ್ನೇನು ಇದೇ ತಿಂಗಳ 27ರಿಂದ ಶೂಟಿಂಗ್ ಸಹ ಶುರುವಾಗಲಿದೆ.

ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಆಯ್ಕೆ ಆಗಿರುವ ಬಗ್ಗೆ ‘ವಿಜಯವಾಣಿ’ ಜತೆ ಖುಷಿ ವ್ಯಕ್ತಪಡಿಸುವ ರಚನಾ, ‘ಶಶಾಂಕ್ ಅವರ ಸಿನಿಮಾದಲ್ಲಿ ನಾಯಕನಷ್ಟೇ ನಾಯಕಿಯ ಪಾತ್ರವೂ ಪ್ರಧಾನವಾಗಿರುತ್ತದೆ. ‘ಲವ್ 360’ ಚಿತ್ರದಲ್ಲಿಯೂ ಅದು ಮುಂದುವರಿದಿದೆ. ನಟನೆಗೆ ಸವಾಲೆನಿಸುವ ರೀತಿಯ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ನಾರ್ಮಲ್​ಲವ್ ಸ್ಟೋರಿ ಅಲ್ಲದೆ ಹಾಸ್ಯ ಮಿಶ್ರಿತ ಹೊಸ ಬಗೆಯ ಕಥೆಯನ್ನು ಈ ಚಿತ್ರದ ಮೂಲಕ ನಿರೀಕ್ಷಿಸಬಹುದು’ ಎಂದಷ್ಟೇ ಹೇಳುತ್ತಾರೆ ರಚನಾ. ಈಗಾಗಲೇ ರಚನಾ ಬತ್ತಳಿಕೆಯಲ್ಲಿ ಮೂರ್ನಾಲ್ಕು ಸಿನಿಮಾಗಳಿವೆ. ಆ ಸಿನಿಮಾಗಳ ಬಗ್ಗೆ ನೋಡುವುದಾದರೆ, ರಿಷಬ್ ಶೆಟ್ಟಿ ಜತೆಗಿನ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಕೆಲಸವನ್ನು ರಚನಾ ಮುಗಿಸಿದ್ದಾರೆ. ‘ತ್ರಿಬಲ್ ರೈಡಿಂಗ್’ ಚಿತ್ರದ ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ‘ಲವ್ ಮಾಕ್​ಟೇಲ್’ ಸಿನಿಮಾ ಕೆಲಸ ಮುಗಿದರೆ, ನೂತನವಾಗಿ ಒಪ್ಪಿಕೊಂಡಿರುವ ‘ಲೆಟ್ಸ್ ಬ್ರೇಕಪ್’ ಸಿನಿಮಾ ಇನ್ನೇನು ಶುರುವಾಗಲಿದೆ.