ಹೈದರಾಬಾದ್: ಇತ್ತೀಚೆಗೆ ಹೃದಯಾಘಾತಕ್ಕೆ ಯುವ ಜನಾಂಗವೇ ಹೆಚ್ಚು ಬಲಿಯಾಗುತ್ತಿದೆ. ಸ್ಯಾಂಡಲ್ವುಡ್ನ ಎರಡು ರತ್ನಗಳಾದ ಪುನೀತ್ ರಾಜ್ಕುಮಾರ್ ಮತ್ತು ಚಿರಂಜೀವಿ ಸರ್ಜಾ ಹಾಗೂ ಬಾಲಿವುಡ್ನ ಯುವ ನಟರಾದ ಸಿದ್ಧಾರ್ಥ್ ಶುಕ್ಲಾ ಮತ್ತು ಬ್ರಹ್ಮ ಮಿಶ್ರಾ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಮತ್ತೊಬ್ಬ ಯುವ ಕಲಾವಿದೆ ಇದೇ ಕಾರಣಕ್ಕೆ ಕೊನೆಯುಸಿರೆಳೆದಿದ್ದಾಳೆ.
ಶ್ರೇಯಾ ಮುರಳಿಧರ್ (27) ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯೂಟ್ಯೂಬರ್, ಇನ್ಸ್ಟಾಗ್ರಾಂ ಇನ್ಫ್ಲ್ಯುಯೆನ್ಸರ್ ಆಗಿದ್ದ ಶ್ರೆಯಾ ಕಿರುಚಿತ್ರಗಳಿ ನಟಿಸುತ್ತಿದ್ದರು. ತುಂಬಾ ಲವಲವಿಕೆಯಿಂದಿದ್ದ ಶ್ರೇಯಾ ಹೃದಯಾಘಾತದಿಂದ ದಿಢೀರನೇ ಅಸುನೀಗಿರುವುದು ಪಾಲಕರು ಮತ್ತು ಸ್ನೇಹಿತರನ್ನು ಆಘಾತಕ್ಕೆ ದೂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಲಾವಿದೆಗೆ ಕಂಬನಿ ಮಿಡಿಯುತ್ತಿದ್ದಾರೆ.
ಕಲಾವಿದೆಯಾಗಲು ಸಾಕಷ್ಟು ವಿಘ್ನಗಳನ್ನು ದಾಟಿ ಬಂದಿರುವ ಶ್ರೇಯಾ, ಕೊನೆಗೂ ತಾನು ಏನಾಗಲು ಬಯಸಿದ್ದಳೋ ಅದನ್ನು ಸಾಧಿಸಿದ್ದಳು. "ಪೆಲ್ಲಿ ಚೂಪುಲು" ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕೂಡ ಭಾಗವಹಿಸಿದ್ದರು. ಇದರಿಂದ ಕೊಂಚ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದ ಶ್ರೇಯಾ, ಆ ಬಳಿಕ ಅನೇಕ ಕಿರುಚಿತ್ರಗಳಲ್ಲಿ ನಟಿಸುವ ಮೂಲಕ ತೆಲುಗಿನಲ್ಲಿ ಎಲ್ಲರಿಗೂ ಪರಿಚಿತರಾಗಿದ್ದರು.
"ವಾಟ್ ದಿ ಫನ್" ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಶ್ರೇಯಾ ಅವರ ಕಿರುಚಿತ್ರಗಳು ಪ್ರಸಾರವಾಗುತ್ತಿದ್ದವು. ಅಲ್ಲದೆ, "ಬ್ಯೂಟಿ ಆ್ಯಂಡ್ ದಿ ಬಾಸ್" ಹೆಸರಿನ ಎರಡನೇ ಸೀಸನ್ನ ವೆಬ್ಸೀರಿಸ್ನಲ್ಲಿಯೂ ನಟಿಸಿದ್ದಾರೆ. ಶ್ರೇಯಾ ಸಾವಿಗೆ ಯೂಟ್ಯೂಬರ್ ಸ್ಟಾರ್ ದೀಪ್ತಿ ಸುನೈನಾ, ನಟಿ ಸುರೇಖಾ ವಾಣಿ ಮಗಳು ಸುಪ್ರಿಯಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)