ಸಿನಿವಾಣಿ

ಕಾಲಿವುಡ್​ ಸೂಪರ್​ ಸ್ಟಾರ್​ ವಿಶಾಲ್​ ಮನೆಯ ಮೇಲೆ ದುಷ್ಕರ್ಮಿಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಚೆನ್ನೈ: ಕಾಲಿವುಡ್​ ಸೂಪರ್​ ಸ್ಟಾರ್​ ಹಾಗೂ ನಾಡಿಗರ್​ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ನಟ ವಿಶಾಲ್​ ಅವರ ಮನೆಯ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಚೆನ್ನೈನ ಅಣ್ಣಾ ನಗರದಲ್ಲಿರುವ ನಿವಾಸದ ಮೇಲೆ ದಾಳಿಯಾಗಿದೆ. ಈ ನಿವಾಸದಲ್ಲಿ ನಟ ವಿಶಾಲ್​ ತಮ್ಮ ಪಾಲಕರೊಂದಿಗೆ ವಾಸವಿದ್ದಾರೆ. ಘಟನೆ ಸಂಬಂಧ ವಿಶಾಲ್​​ ಮ್ಯಾನೇಜರ್​ ಹರಿಕೃಷ್ಣನ್​​ ಪೊಲೀಸ್​ ದೂರು ದಾಖಲಿಸಿದ್ದಾರೆ. ಸಾಕ್ಷಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಕೆಂಪು ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮನೆಯ ಮೇಲೆ ಕಲ್ಲುಗಳನ್ನು ತೂರಾಡಿ ದಾಳಿ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ವಿಶಾಲ್​ ಅವರ ಸಿನಿಮಾ ವಿಚಾರಕ್ಕೆ ಬಂದರೆ, ತಮ್ಮ ಮುಂದಿನ ಲಾಠಿ ಚಿತ್ರದ ಶೂಟಿಂಗ್​ ಅನ್ನು ವಿಶಾಲ್​ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮುಂದೆ "ಮಾರ್ಕ್​ ಆ್ಯಂಟೋನಿ" ಸಿನಿಮಾದಲ್ಲಿ ವಿಶಾಲ್​ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)