ಸಿನಿವಾಣಿ

ಇದುವರೆಗೂ ಕಣ್ಣು ತೆರೆಯದ ನಟ ಧರಮ್​ ತೇಜ್​ಗೆ ಏನಾಗಿದೆ? ಪವನ್​ ಕಲ್ಯಾಣ್​ ಹೇಳಿದ್ದು ಹೀಗೆ...

ಹೈದರಾಬಾದ್​: ಖ್ಯಾತ ತೆಲುಗು ನಟ ಸಾಯಿ ಧರಮ್ ತೇಜ್ ಅವರು ಗಣೇಶ ಹಬ್ಬದ ದಿನವೇ ಬೈಕ್​ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಅಪಘಾತ ನಡೆದ ತಿಂಗಳು ಕಳೆಯುತ್ತಾ ಬಂದರೂ ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಅವರ ಸೋದರಮಾವ ಹಾಗೂ ಸೂಪರ್​ ಸ್ಟಾರ್​ ಪವನ್​ ಕಲ್ಯಾಣ್​, ಧರಮ್​ ತೇಜ್​ ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.

ಧರಮ್​ ತೇಜ್​ ಈಗಲೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಿಲ್ಲ. ಇನ್ನೊಂದೆಡೆ ಧರಮ್​ ತೇಜ್​ ಅಭಿನಯದ "ರಿಪಬ್ಲಿಕ್​" ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್​ 1ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ರಿಪಬ್ಲಿಕ್​ ಸಿನಿಮಾ ಪ್ರೀ ರಿಲೀಸ್​ ಈವೆಂಟ್​ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ಪವನ್​ ಕಲ್ಯಾಣ್​ ಆಗಮಿಸಿದ್ದರು. ಆದರೆ, ಧರಮ್​ ತೇಜ್​ ಆಸ್ಪತ್ರೆಯಲ್ಲೇ ಇರುವುದರಿಂದ ತಮ್ಮದೇ ಸಿನಿಮಾ ಈವೆಂಟ್​ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮದಲ್ಲಿ ಧರಮ್​ ತೇಜ್​ ಆರೋಗ್ಯದ ಸ್ಥಿತಿಯ ಬಗ್ಗೆ ಮಾತನಾಡಿದ ಪವನ್​ ಕಲ್ಯಾಣ್​, ಧರಮ್​ ತೇಜ್​ ಇನ್ನು ಬೆಡ್​ ಮೇಲೆಯೇ ಇದ್ದು, ಈವರೆಗೂ ಕಣ್ಣನ್ನು ಕೂಡ ತೆರೆದಿಲ್ಲ ಎಂದರು. ಅಭಿಮಾನಿಗಳ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖವಾಗಲಿದ್ದು, ಶೀಘ್ರವೇ ಮನೆಗೆ ಮರಳಲಿದ್ದಾನೆಂದು ತಿಳಿಸಿದರು.

ಅಪಘಾತ ಹೇಗಾಯಿತು?

ಹೈದರಾಬಾದ್​ನ ಐಕಿಯಾ ಕೇಬಲ್​ ಬ್ರಿಡ್ಜ್​ ಬಳಿ ಸೆ.10 ಗಣೇಶ ಹಬ್ಬದ ರಾತ್ರಿ 7.30ರ ಸುಮಾರಿಗೆ ಅಪಘಾತ ಸಂಭವಿಸಿತು. ಹಬ್ಬದ ದಿನದಂದು ಐಕಿಯಾ ಕೇಬಲ್​ ಬ್ರಿಡ್ಜ್​ನಲ್ಲಿ ಟ್ರಾಫಿಕ್​ ಇರಲಿಲ್ಲ. ರಸ್ತೆಗಳು ಖಾಲಿಯಿದ್ದದ್ದರಿಂದ ಧರಮ್ ತೇಜ್​ ವೇಗವಾಗಿ ಬೈಕ್​ನಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್​ ಸ್ಕಿಡ್​ ಆಗಿ ಬಿದ್ದಿದ್ದರು. ಸ್ಥಳದಲ್ಲಿ ಮರಳು ಇದ್ದುದ್ದರಿಂದ ಬೈಕ್​ ಸ್ಕಿಡ್​ ಆಯಿತು ಎನ್ನಲಾಗಿದೆ. ಪೊಲೀಸ್​ ಮೂಲಗಳ ಪ್ರಕಾರ ಧರಮ್​ ತೇಜ್​ ಹೆಲ್ಮೆಟ್​ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ತಿಳಿಸಿದ್ದಾರೆ.

ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿರುವುದರಿಂದ ಭಾರತೀಯ ದಂಡಸಂಹಿತೆ 336 ಮತ್ತು 184 ಸೆಕ್ಷನ್​ಗಳ ಅಡಿಯಲ್ಲಿ ರಾಯದುರ್ಗ ಠಾಣಾ ಪೊಲೀಸರು ಧರಮ್​ ತೇಜ್​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)