More

    ಓಟಿಟಿಯ ಸದ್ಬಳಕೆ ಅಗತ್ಯ: ವಿಜಯವಾಣಿ ಕ್ಲಬ್​ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್..

    ಹಾಳಾಗಿರುವ ಚಿತ್ರಮಂದಿರಗಳಲ್ಲಿ ಪ್ರದರ್ಶನ ವ್ಯವಸ್ಥೆಯನ್ನು ಉತ್ತಮಗೊಳಿಸಿದರೆ ಮಾತ್ರ ಓಟಿಟಿಗೆ ಸಮನಾಗಿ ನಿಲ್ಲಬಹುದು ಮತ್ತು ಚಿತ್ರಮಂದಿರಗಳಲ್ಲಿ ಚಿತ್ರ ನೋಡುವ ಸಂಸ್ಕೃತಿಯನ್ನು ಉಳಿಸಬಹುದು ಇದು ಹಿರಿಯ ನಿರ್ದೇಶಕ ಮತ್ತು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಸ್ಪಷ್ಟ ಅಭಿಪ್ರಾಯ. ಶನಿವಾರ ಸಂಜೆ, ವಿಜಯವಾಣಿ ಕ್ಲಬ್​ಹೌಸ್ ಸಂವಾದದಲ್ಲಿ ಓಟಿಟಿ ವೇದಿಕೆಗಳಿಂದ ಆಗುತ್ತಿರುವ ಪ್ರಯೋಜನ ಮತ್ತು ಅದರಿಂದ ಚಿತ್ರಮಂದಿರಗಳು ಎದುರಿಸುತ್ತಿರುವ ಸಮಸ್ಯೆ ಕುರಿತು ಅವರು ಸುದೀರ್ಘವಾಗಿ ಮಾತನಾಡಿದರು. ಈ ಸಂವಾದದಲ್ಲಿ ನಟ ವಸಿಷ್ಠ ಸಿಂಹ, ನಿರ್ದೇಶಕ ಟಿ.ಎನ್. ಸೀತಾರಾಮ್ ಪ್ರೊ.ಕೃಷ್ಣೇಗೌಡ ಸೇರಿ ಹಲವು ಗಣ್ಯರು ಭಾಗವಹಿಸಿದರು.

    ಧಾರಾವಾಹಿ ನಿರ್ದೇಶಕನ ಸ್ವಾತಂತ್ರ್ಯ ಕಿತ್ತುಕೊಂಡಿದೆ

    ‘ವಠಾರ’ ನನ್ನ ಮೊದಲ ಧಾರಾವಾಹಿ. 1 ಸಾವಿರ ಎಪಿಸೋಡ್ ಆಗಿದೆ. ಸಾಮಾಜಿಕ ಕಳಕಳಿ ಹಾಗೂ ನೈಜತೆಯನ್ನು ತೋರಿಸುವ ಸ್ವಾತಂತ್ರ್ಯವನ್ನು ಕಳೆದುಕೊಂಡು ಈಗ ಧಾರಾವಾಹಿಗಳು ಮೂಡಿಬರುತ್ತಿವೆ. ಹೀಗಾಗಿ, ಸೋದರ ವಾಹಿನಿಗಳಲ್ಲಿ ಬೇರೆ ಭಾಷೆಯ ಧಾರಾವಾಹಿಗಳನ್ನು ಕನ್ನಡೀಕರಿಸಿ ವಿಜೃಂಭಿಸುವ ಕಾರ್ಯ ನಡೆಯುತ್ತಿದೆ. ಒಟ್ಟಾರೆ 10 ಧಾರಾವಾಹಿಗಳನ್ನು ಬರೆದು ನಿರ್ದೇಶನ ಮಾಡಿದ್ದೇನೆ. ಈಗಲೂ ನನ್ನಲ್ಲಿ ಹೊಸತನಕ್ಕೆ ಕಡಿಮೆಯೇನಿಲ್ಲ. ಆದರೆ, ಧಾರಾವಾಹಿಯು ನಿರ್ದೇಶಕನ ಕಥೆ ಹಾಗೂ ನೈಜತೆಯ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಕಥೆಗಿಂತ ಜಾಹೀರಾತು ಪ್ರದರ್ಶನವೇ ಮುಖ್ಯವಾಗುತ್ತಿದೆ. ನನ್ನಂತಹ ಸಾಹಿತ್ಯ ಹಿರಿತನದ ವ್ಯಕ್ತಿಯಾಗಿ ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರೋ ಒಬ್ಬರು ನಿಯಂತ್ರಣ ಮಾಡುವುದನ್ನು ನಾನು ಒಪ್ಪಲಾರೆ. ಕಮರ್ಷಿಯಲ್ ಒತ್ತಡದಿಂದ ಎಲ್ಲವೂ ಅಳಿದು ಹೋಗಿದ್ದರಿಂದ ನಾನು ಧಾರಾವಾಹಿ ಕ್ಷೇತ್ರದಿಂದ ಹೊರಗೆ ಬಂದಿದ್ದೇನೆ.

    ಚಿತ್ರಮಂದಿರಗಳಿಗೆ ಸಾವಿಲ್ಲ

    ದೊಡ್ಡಪರದೆಯ ಮೇಲೆ ಚಿತ್ರಗಳನ್ನು ನೋಡುವ ಅವಕಾಶ ಕಳೆದುಕೊಳ್ಳಬಾರದು. ದೊಡ್ಡ ಸ್ಟಾರ್ ಇರಲಿ ಅಥವಾ ಹೊಸಬರೇ ಇರಲಿ, ಎಲ್ಲರಿಗೂ ತಮ್ಮ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿ ಎಂಬ ಆಸೆ ಇರುತ್ತದೆ. ಇಲ್ಲಿ ಚಿತ್ರಮಂದಿರಗಳ ಪರಿಕಲ್ಪನೆ ಬದಲಾಗಬೇಕು. ಮುಂಚಿನ ತರಹ 500 ಅಥವಾ 1000 ಆಸನಗಳ ಚಿತ್ರಮಂದಿರಗಳ ಅವಶ್ಯಕತೆ ಇಲ್ಲ. ಕಡಿಮೆ ಸಂಖ್ಯೆ ಆಸನಗಳ ಚಿತ್ರಮಂದಿರಗಳಷ್ಟೇ ಅಲ್ಲ, ಒಳ್ಳೆಯ ಸೌಂಡು ಮತ್ತು ಆಸನ ವ್ಯವಸ್ಥೆ ಇರುವ ಚಿತ್ರಮಂದಿರಗಳು ಈ ಕಾಲಕ್ಕೆ ಹೆಚ್ಚು ಸೂಕ್ತ. ಹಾಗಾಗಿ, ಚಿತ್ರಮಂದಿರಗಳಿಗೆ ಯಾವತ್ತೂ ಸಾವಿಲ್ಲ.

    ಕಾಳೂ ಇದೆ; ಜೊಳ್ಳೂ ಇದೆ

    ಪ್ರಮುಖವಾಗಿ ಕನ್ನಡಿಗರು ಯಾವುದೇ ಭಾಷೆಯ ಚಿತ್ರಗಳಾದರೂ, ಆ ಭಾಷೆಗಳಲ್ಲೇ ನೇರವಾಗಿ ನೋಡುತ್ತಾರೆ. ಆದರೆ, ಬೇರೆ ರಾಜ್ಯಗಳಲ್ಲಿ ಆ ಭಾಷೆಯ ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ನೇರವಾಗಿ ನೋಡುವುದಿಲ್ಲ. ಡಬ್ ಆದರೆ ಮಾತ್ರ ನೋಡುತ್ತಾರೆ. ಹಾಗಾದರೆ, ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಇಲ್ಲವಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಅದು ತಪು್ಪ. ಎಲ್ಲ ಕಡೆ ಇರುವಂತೆ ಇಲ್ಲಿ ಕಾಳು ಜೊಳ್ಳು ಎಲ್ಲವೂ ಇದೆ. ಪ್ರಮುಖವಾಗಿ, ನಮ್ಮ ಪ್ರೇಕ್ಷಕವರ್ಗ ಇರುವುದು ಬೆಂಗಳೂರಿನಂಥ ಮಹಾನಗರಗಳಲ್ಲಿ. ಆದರೆ, ಆ ಪ್ರೇಕ್ಷಕರೇ ಕನ್ನಡ ಚಿತ್ರಗಳನ್ನು ನೋಡುವುದಿಲ್ಲ ಎನ್ನುವುದು ವಾಸ್ತವ ಸತ್ಯ. ಓಟಿಟಿಯಲ್ಲಾದರೆ, ಎಲ್ಲರಿಗೂ ತಲುಪಿದಂತಾಗುತ್ತದೆ.

    ಓಟಿಟಿಯೊಂದೇ ಕಾರಣವಲ್ಲ

    ಓಟಿಟಿಯಿಂದ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಮಾತಿದೆ. ಜನ ಚಿತ್ರಮಂದಿರಗಳಿಗೆ ಬರದಿರುವುದಕ್ಕೆ ಬೇರೆಬೇರೆ ಕಾರಣಗಳೂ ಇವೆ. ಪ್ರಮುಖವಾಗಿ, ಕೆಲವು ಚಿತ್ರಮಂದಿರಗಳಲ್ಲಿ ನಿರ್ವಹಣೆ ಸರಿ ಇಲ್ಲ. ಹಾಗಾಗಿ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಯಿತು. ಆ ನಂತರ ಮಲ್ಟಿಪ್ಲೆಕ್ಸ್​ಗಳು ಬಂದವು. ಮಲ್ಟಿಪ್ಲೆಕ್ಸ್​ನಲ್ಲಿ ಬಾಡಿಗೆ ಬದಲು ಶೇಕಡವಾರು ಪದ್ಧತಿ ಜಾರಿಗೆ ತರಲಾಯಿತು. ಯಾವುದೇ ಹೊಸ ವ್ಯವಸ್ಥೆ ಬಂದರೂ, ಅಂತಿಮವಾಗಿ ಬಲಿಪಶುವಾಗುತ್ತಿದ್ದುದು ನಿರ್ವಪಕರು. ಮಲ್ಟಿಪ್ಲೆಕ್ಸ್​ಗಳಲ್ಲಿ ದುಬಾರಿತನ, ಅಕಾಲಿಕ ಪ್ರದರ್ಶನ, ಪರಭಾಷಾ ಚಿತ್ರಗಳಿಗೆ ಪ್ರಾಮುಖ್ಯ… ಮುಂತಾದ ಕಾರಣಗಳಿಂದ ಜನ ಬರುವುದು ಕಡಿಮೆಯಾಯಿತು. ಈಗ ಓಟಿಟಿ ಯಿಂದ ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

    ಲಾಭಕ್ಕಾಗಿ ಕಾಯಬೇಕು

    ಅಕ್ಕಪಕ್ಕದ ರಾಜ್ಯಗಳಲ್ಲಿ ಆ ಭಾಷೆಯ ಚಿತ್ರಗಳಿಗೆಂದೇ ಓಟಿಟಿಗಳಿವೆ. ನಮ್ಮಲ್ಲೂ ಯಾಕೆ ಓಟಿಟಿ ಮಾಡುತ್ತಿಲ್ಲ ಎಂಬ ಮಾತಿದೆ. ಆದರೆ, ಓಟಿಟಿ ಮಾಡುವುದು ಅಷ್ಟು ಸುಲಭವಾ? ಅದು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿರಬೇಕು, ಅತ್ಯುತ್ತಮ ತಂತ್ರಜ್ಞಾನವಿರಬೇಕು, ಹೆಚ್ಚೆಚ್ಚು ಕಂಟೆಂಟ್ ಇರಬೇಕು ಮತ್ತು ಎಲ್ಲದಕ್ಕೂ ಹೆಚ್ಚಾಗಿ ಲಾಭ ಬರುವವರೆಗೂ ನಷ್ಟ ಅನುಭವಿಸುವ ತಾಳ್ಮೆ ಇರಬೇಕು. ಒಂದು ಟಿವಿ ಚಾನಲ್ ಲಾಭ ಗಳಿಸಬೇಕು ಎಂದರೆ 10 ವರ್ಷಗಳಾದರೂ ಕಾಯಬೇಕು ಅಂತ ಕೇಳಿದ್ದೇನೆ. ಅದೇ ರೀತಿ ಓಟಿಟಿಯಿಂದ ಲಾಭ ಬರುವುದಕ್ಕೂ ಸಮಯ ಬೇಕು ಮತ್ತು ಕಾಯುವ ವ್ಯವಧಾನ ಇರಬೇಕು. ನಮ್ಮಲ್ಲಿ ಸಿರಿವಂತರು ಹಲವರಿದ್ದಾರೆ. ಆದರೆ, ಇಂಥದ್ದೊಂದು ಹೊಸ ಬಿಜಿನೆಸ್ ಬಗ್ಗೆ ಹಿಂಜರಿಕೆ ಇದೆ. ಅದಕ್ಕೊಂದು ವಿಷನ್ ಬೇಕು. ಒಂದು ದೊಡ್ಡ ಸಂಸೆಯಿಂದ ಅದು ಸಾಧ್ಯವಾಗಬಹುದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಥವಾ ಕನ್ನಡ ಚಲನಚಿತ್ರ ನಿರ್ವಪಕರ ಸಂಘದಿಂದ ಅದು ಸಾಧ್ಯವಾಗುವುದು ಕಷ್ಟ. ಯಾರೋ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಸಹ ಓಟಿಟಿ ಮಾಡುವುದಲ್ಲ. ಈ ವ್ಯವಹಾರ ಗೊತ್ತಿದ್ದರೆ ಮಾತ್ರ ಮಾಡಬೇಕು.

    ಮರೆಯಲಾರದ ಅನುಭವಗಳು

    ಓಟಿಟಿಯ ಸದ್ಬಳಕೆ ಅಗತ್ಯ: ವಿಜಯವಾಣಿ ಕ್ಲಬ್​ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್..‘ಪವರ್​ಫುಲ್ ಮ್ಯಾನ್ ಕಮ್ ಫ್ರಂ ಪವರ್​ಫುಲ್ ಪ್ಲೇಸಸ್’ ಎನ್ನುವಂತೆ ನಾಗತಿಹಳ್ಳಿ ಚಂದ್ರಶೇಖರ್ ಮೇಷ್ಟ್ರ ಊರಾದ ನಾಗತಿಹಳ್ಳಿಯೂ ಉತ್ತಮ ಸ್ಥಳವಾಗಿದೆ. ಒಮ್ಮೆ ಅವರ ಊರಹಬ್ಬಕ್ಕೆ ಹೋದಾಗ ಮೇಷ್ಟ್ರಿಗೆ ಊರಿನ ಮೇಲಿನ ಪ್ರೀತಿ, ಜನರೊಂದಿಗೆ ಒಡನಾಟ ಈ ಎಲ್ಲ ನೋಡಿ ನನಗೆ ಆಶ್ಚರ್ಯವಾಯಿತು. ಅವರ ವಿಶಾಲ ಮನೋಭಾವ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೆ. ಮೇಷ್ಟ್ರಿಗೆ ಸಿನಿಮಾ ಬಗೆಗಿನ ಪ್ರೀತಿ, ಕಾಳಜಿ ಅತೀವವಾಗಿದೆ. ನಾನು ಅವರ ಸಿನಿಮಾಗಳಿಗೆ ಅಭಿಮಾನಿ, ಅವರ ಬರವಣಿಗೆಗಳಿಗೆ ಶಿಷ್ಯ. ಮೇಷ್ಟ್ರು ಬಗ್ಗೆ ಹೇಳುವ ಒಂದು ವಿಚಾರವೆಂದರೆ ‘ಸಿನಿಮಾ ನಟನೆಗೆ ಹೇಳಿದ ಪೇಮೆಂಟನ್ನು ಹೇಳಿದ ಸಮಯಕ್ಕೆ ಕೊಟ್ಟ ಮೊದಲ ನಿರ್ವಪಕರಲ್ಲಿ ಮೊದಲಿಗರಾಗಿದ್ದಾರೆ’. ಸಿನಿಮಾ ಚಿತ್ರೀಕರಣಕ್ಕೆ ತೆರಳಿದ್ದಾಗ ಲಂಡನ್​ನಲ್ಲಿ ಕಳೆದ ಎಲ್ಲ ಕ್ಷಣಗಳೂ ನನಗೆ ಜೀವನದಲ್ಲಿ ಮರೆಯಲಾರದ ಸಂಗತಿಗಳಾಗಿವೆ. ಅವರ ಶಿಷ್ಯನಾಗಿ ಹಾಗೂ ಅತೀ ಆತ್ಮೀಯ ಗೆಳೆಯನಾಗಿ ಸದಾ ಒಡನಾಟದಲ್ಲಿ ಇರುತ್ತೇನೆ.

    | ವಸಿಷ್ಠ ಸಿಂಹ ನಾಯಕ ನಟ

    ಟಿ.ಎನ್. ಸೀತಾರಾಮ್ 10 ರಿಂದ 12 ಲಕ್ಷದ ಚಿಕ್ಕದಾದ ಸರಳ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚಿಕ್ಕ ಬಜೆಟ್​ನ ಸಿನಿಮಾ ಮಾಡುವವರಿಗೆ ನೆರವು ನಿಡಲು ಒಂದು ಸಂಘಟನೆ ಮೂಲಕ ವೇದಿಕೆ ಕಲ್ಪಿಸಬೇಕು. ಅದಕ್ಕೆ ನೀವು ನಾಯಕರಾಗಿ ನಿಲ್ಲಬೇಕು. ಯೋಗರಾಜ್ ಭಟ್ ಸೇರಿ ಕೆಲವು ನಿರ್ದೇಶಕರು ಸಂಘಟನೆಗಳಿಗೆ ಬ್ರಾ್ಯಂಡಿಂಗ್ ಆಗಬೇಕು. ಹೀಗಾದಲ್ಲಿ ಸಂಸ್ಥೆಯ ಉಳಿದ ಎಲ್ಲ ಜವಾಬ್ದಾರಿಯನ್ನು ಯುವಕರೇ ಮುಂದುವರಿಸುತ್ತಾರೆ.

    ನಾ. ಚಂದ್ರಶೇಖರ್: ಊರಿನ ಕೆಲಸ, ಶಾಲೆ, ಸಿನಿಮಾ ಕಾರ್ಯಗಳು ಸಾಕಷ್ಟಿರುವುದರಿಂದ ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ನನಗಿಂತ ಹೆಚ್ಚಿನ ಶಕ್ತಿಶಾಲಿಗಳು ನಾಯಕತ್ವ ವಹಿಸಿದರೆ ಉತ್ತಮ ವೇದಿಕೆಯೂ ಸಿಗಬಹುದು. ಜತೆಗೆ, ಸಂಸ್ಥೆ ನಿರ್ವಣದ ಬಗ್ಗೆ ಚರ್ಚೆಗಳೂ ನಡೆದಿದ್ದು, ಈ ಬಗ್ಗೆ ಪೇಪರ್ ವರ್ಕ್ಸ್ ಮಾಡಲಾಗಿದೆ. 2022ರಲ್ಲಿ ಆರಂಭಿಸುವ ಗುರಿ ಇಟ್ಟುಕೊಂಡಿದ್ದೇನೆ.

    ಓಟಿಟಿಯ ಸದ್ಬಳಕೆ ಅಗತ್ಯ: ವಿಜಯವಾಣಿ ಕ್ಲಬ್​ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್..

    ನಾನು ಬಲ್ಲ ಹಾಗೆ ಕಲೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಅತಿ ಕಡಿಮೆ ಇನ್​ಫ್ಲೂಯನ್ಸ್ ನಡೆಯುತ್ತದೆ. ಕೈಗಾರಿಕೆ, ರಾಜಕೀಯ, ಉದ್ಯಮ ಎಲ್ಲವೂ ಪ್ರಭಾವ ಬೀರುತ್ತವೆ. ರಾಜಕೀಯ ನಾಯಕರು ಕೋಟ್ಯಂತರ ರೂ. ಬಂಡವಾಳ ಹೂಡಿ ಸಿನಿಮಾ ಮಾಡಿದರೂ ಜನರು ಒಪ್ಪಿ ಸ್ವೀಕರಿಸಿಲ್ಲ. ಕೊಳೆಗೇರಿ ನಿವಾಸಿ, ಸಾಮಾನ್ಯ ಪಡ್ಡೆ ಹುಡುಗರ ನಟನೆಯನ್ನು ಪ್ರೇಕ್ಷಕರು ಒಪ್ಪಿಕೊಂಡು ಮೆರೆಸಿದ್ದಾರೆ. ಗಾಡ್ ಫಾದರ್ ಇದ್ದರೆ ಒಂದೆರಡು ಸಿನಿಮಾ ಮಾತ್ರ ಸ್ವೀಕರಿಸಬಹುದು; ಆದರೆ ನಿರಂತರ ಯಶಸ್ಸು ಸಾಧ್ಯವಿಲ್ಲ.

    | ಪ್ರೊ. ಕೃಷ್ಣೇಗೌಡ ವಾಗ್ಮಿ

    ವಂಚನೆಗಳ ಜಾಲ ಇಲ್ಲ

    ಓಟಿಟಿಯಿಂದ ನನಗೆ ಬಹಳ ಅನುಕೂಲವಾಗಿದೆ. ಕಳೆದ ವರ್ಷ ನನ್ನ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ಬಿಡುಗಡೆಯಾಗಿ ಒಂದು ವಾರಕ್ಕೆ ಲಾಕ್​ಡೌನ್ ಘೋಷಣೆಯಾಯಿತು. ಇಂತಹ ಸಮಯದಲ್ಲಿ ಅಮೇಜಾನ್ ಪ್ರೖೆಮ್ೆ ನಮ್ಮ ಚಿತ್ರದ ಹಕ್ಕುಗಳು ಮಾರಾಟವಾಯಿತು. 64 ದೇಶಗಳಲ್ಲಿ ಸಬ್​ಟೈಟಲ್​ಗಳೊಂದಿಗೆ ಚಿತ್ರ ಬಿಡುಗಡೆಯಾಯಿತು. ಮಿಲಿಯನ್​ಗಟ್ಟಲೆ ಜನ ಚಿತ್ರವನ್ನು ನೋಡಿದರು. ಜಪಾನ್, ನೈಜೀರಿಯಾ ಮುಂತಾದ ದೇಶಗಳಲ್ಲೂ ಜನ ಚಿತ್ರ ನೋಡಿದ್ದಾರೆ ಮತ್ತು ಈಗಲೂ ನೋಡುತ್ತಲೇ ಇದ್ದಾರೆ. ಆ ಕಾರಣಕ್ಕೆ ಓಟಿಟಿ ಬಹಳ ಮುಖ್ಯವಾಗುತ್ತದೆ. ಆದರೆ, ಕಾಪೋರೇಟ್ ಕಂಪನಿಯಾದ್ದರಿಂದ ಬಹಳ ಹರಿತವಾದ ಬ್ಲೇಡು ಅದು. ಇಷ್ಟು ಕತ್ತರಿಸುತ್ತೀನಿ ಎಂದು ಇ-ಮೇಲ್ ಮೂಲಕ ಹೇಳುತ್ತಾರೆ. ಅಲ್ಲಿ ವಂಚನೆಗಳ ಜಾಲ ಇಲ್ಲ. ಆ ಕಡೆ ಯಾರಿದ್ದಾರೆ ಎಂದು ಗೊತ್ತಿರದಿದ್ದರೂ, ನಮ್ಮ ಖಾತೆಗೆ ಸರಿಯಾಗಿ ಹಣ ಬಂದು ಬೀಳುತ್ತದೆ.

    ರಾಜ್ಯದಲ್ಲಿ ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು ಸ್ಫೋಟ; ಟ್ಯಾಂಕರ್​​ನಿಂದ ಸೋರುತ್ತಿದೆ ಪೆಟ್ರೋಲ್​..

    ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಮಗ; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ, ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts