ಹೈದರಾಬಾದ್: ಮಿಲ್ಕಿ ಬ್ಯೂಟಿ ತಮನ್ನಾ, ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ತಮ್ಮ ಮುಂದಿನ ಚಿತ್ರ "ಬಬ್ಲಿ ಬೌನ್ಸರ್" ಚಿತ್ರದ ಪ್ರಚಾರಕ್ಕಾಗಿ ನಿನ್ನೆ ಹೈದರಾಬಾದ್ಗೆ ಭೇಟಿ ನೀಡಿದ್ದರು. ಈ ಸಿನಿಮಾ ಬೌನ್ಸರ್ಗಳ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಆದರೆ, ಕಾಕತಾಳೀಯ ಎಂಬಂತೆ ನಿನ್ನೆ ಬೌನ್ಸರ್ಗಳ ಅನುಚಿತ ವರ್ತನೆಯಿಂದಾಗಿ ಸ್ವತಃ ತಮನ್ನಾ ಮುಜುಗರಪಡುವಂತಾಯಿತು.
ಚಿತ್ರದ ಪ್ರಚಾರದ ವೇಳೆ ತಮನ್ನಾ ಅವರ ಫೋಟೋ ಕ್ಲಿಕ್ಕಿಸಿಕೊಳ್ಳಲು ಟಾಲಿವುಡ್ನ ಫೋಟೋಗ್ರಾಫರ್ಗಳು ಮುಗಿಬಿದ್ದರು. ಅವರಲೊಬ್ಬರು ತಮನ್ನಾ ಜೊತೆ ವಿಡಿಯೋ ಬೈಟ್ ತೆಗೆದುಕೊಳ್ಳಲು ಬಯಸಿದ್ದರು. ಆದರೆ, ಬೌನ್ಸರ್ಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಅಲ್ಲದೆ, ಬೌನ್ಸರ್ಗಳಲ್ಲಿ ಒಬ್ಬ ಮಾಧ್ಯಮದವರ ವಿರುದ್ಧ ಕೆಟ್ಟ ಪದ ಬಳಸಿದನು ಎಂದು ಆರೋಪಿಸಲಾಗಿದೆ. ಈ ಸಂಗತಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬೌನ್ಸರ್ ಒಬ್ಬರ ಕಸದಬುಟ್ಟಿಯನ್ನು ಮೇಲೆತ್ತಿಕೊಂಡು ಹೊಡೆಯುವುದಾಗಿ ಫೋಟೋಗ್ರಾಫರ್ಗಳಿಗೆ ಬೆದರಿಕೆ ಹಾಕುತ್ತಿರುವ ದೃಶ್ಯವು ಇದೆ. ಈ ಘಟನೆ ಹೈದರಾಬಾದ್ನ ಖಾಸಗಿ ಸ್ಟುಡಿಯೋ ಒಂದರಲ್ಲಿ ನಡೆದಿದೆ.
ಯಾವುದು ಅಡಚಣೆಯಾಗಲಿ, ತೊಂದರೆಯಾಗಲಿ ಅಥವಾ ಗಲಾಟೆ ಆಗದಂತೆ ತಡೆಯುವುದು ಬೌನ್ಸರ್ಗಳ ಕೆಲಸ. ಆದರೆ, ಈ ಪ್ರಕರಣದಲ್ಲಿ ಬೌನ್ಸರ್ಗಳೇ ತೊಂದರೆ ಉಂಟುಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಬಬ್ಲಿ ಬೌನ್ಸರ್ ಮಹಳಾ ಪ್ರಧಾನ ಸಿನಿಮಾ. ಈ ಸಿನಿಮಾ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸೆ. 23ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)