More

    ಶರಣಾಗಬಯಸಿದ ಆರೋಪಿ; ಆ ಕ್ಷಣ…

    ಶರಣಾಗಬಯಸಿದ ಆರೋಪಿ; ಆ ಕ್ಷಣ...ಕೊಲೆಯಾಗಿ ತಂದೂರಿ ಒಲೆಯಲ್ಲಿ ಬೆಂದುಹೋಗಿದ್ದ ಸುಶೀಲ್ ಶರ್ವನ ಪತ್ನಿ ನೈನಾ ಸಾಹನಿ 1966ರಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ್ದಳು. 1986ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯ ಸದಸ್ಯೆಯಾದಳು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ವಿಮಾನ ಚಾಲಕಿಯಾಗಬೇಕೆಂಬ ಉದ್ದೇಶದಿಂದ ತರಬೇತಿಯನ್ನೂ ಪಡೆದಳು. ಆ ಸಮಯದಲ್ಲಾಕೆ ಎನ್.ಎಸ್.ಯು.ಐ ಸಂಘಟನೆಯ ಪದಾಧಿಕಾರಿಯಾಗಿದ್ದ ಮತಲೂಬ್ ಕರೀಂ ಎನ್ನುವವನ ಸನಿಹಕ್ಕೆ ಬಂದಳು. ಇಬ್ಬರೂ ಪರಸ್ಪರ ಪ್ರೀತಿಸತೊಡಗಿದರು. ಕೆಲ ಕಾಲದ ನಂತರ ಆಕೆಗೆ ಎನ್.ಎಸ್.ಯು.ಐನ ಇನ್ನೊಬ್ಬ ಪದಾಧಿಕಾರಿ ಸುಶೀಲ್ ಶರ್ಮಾ ಬಲೆ ಹಾಕಿದ. ತನ್ನನ್ನು ಲಗ್ನವಾಗಲು ಕೋರಿದ. ನೈನಾ ಒಪ್ಪಿದಾಗ, ಪಕ್ಷ ರಾಜಕೀಯದಿಂದ ದೂರವಾಗಬೇಕು ಮತ್ತು ಮತಲೂಬ್ ಕರೀಂನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಬೇಕು ಎಂಬೆರಡು ಷರತ್ತುಗಳನ್ನಿಟ್ಟ. ಅವುಗಳಿಗೂ ಆಕೆ ಒಪ್ಪಿದಾಗ ದೇವಾಲಯವೊಂದರಲ್ಲಿ ಕುಟುಂಬ ಸದಸ್ಯರ ಎದುರು ಅವಳನ್ನು ಗುಟ್ಟಾಗಿ ಲಗ್ನವಾದ. ನಂತರ ಅವರು ಮಂದಿರ್ ಮಾರ್ಗ್​ನ ಅಪಾರ್ಟ್​ವೆುಂಟ್​ನಲ್ಲಿ ವಾಸಿಸತೊಡಗಿದಳು. ನೈನಾ ಬಟ್ಟೆಯಂಗಡಿ ತೆರೆದು ವಹಿವಾಟನ್ನು ನೋಡಿಕೊಳ್ಳುತ್ತಿದ್ದಳು.

    ಪ್ರೀತಿಸಿ ಮದುವೆಯಾದ ನೈನಾಳನ್ನು ಸುಶೀಲ್ ಏಕೆ ಕೊಂದ, ಹಾಗೂ ಆತ ಎಲ್ಲಿ ಅಡಗಿರಬಹುದೆಂದು ಪೊಲೀಸರು ಬಗಿಯಾ ರೆಸ್ಟೊರೆಂಟಿನ ಮ್ಯಾನೇಜರ್ ಕೇಶವ್​ನನ್ನು ಕೇಳಿದಾಗ, ‘ಆತ ನೈನಾಳನ್ನು ಏಕೆ ಕೊಂದನೆಂದು ನನಗೆ ಗೊತ್ತಿಲ್ಲ. ನಿಮ್ಮ ಜನರು ಬೆಂಕಿ ಆರಿಸತೊಡಗಿದಾಗ ಆತ ತನ್ನ ಕಾರನ್ನೇರಿ ಹೊರಟುಹೋದ, ಬಹುಶಃ ಅವನು ಪೀತಂಪುರದಲ್ಲಿರುವ ತನ್ನ ಮಾತಾಪಿತರ ಮನೆಗೆ ಹೋಗಿರಬಹುದು’ ಎಂದ. ಸುಶೀಲ್ ಬಳಸುತ್ತಿದ್ದ ಬಿಳಿಯ ಮಾರುತಿ ಕಾರಿನ ವಿವರಗಳನ್ನೂ ಕೊಟ್ಟ.

    ಪೀತಂಪುರದಲ್ಲಿದ್ದ ಸುಶೀಲ್​ನ ತಂದೆಯ ಮನೆಗೆ ಹೋದ ತನಿಖಾಧಿಕಾರಿ ಸುಶೀಲ್​ನನ್ನು ಹುಡುಕಲು ನಗರದ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿಯಿತ್ತರು. ದೆಹಲಿಯ ಹೋಟೆಲ್​ಗಳು, ಗೆಸ್ಟ್​ಹೌಸ್​ಗಳು ಮತ್ತು ಸುತ್ತಮುತ್ತಲಿನ ಪಟ್ಟಣಗಳಲ್ಲಿ ಅವನನ್ನು ಹುಡುಕಲು ತಂಡಗಳನ್ನು ನೇಮಿಸಿದರು. ಸುಶೀಲ್​ನ ಸಂಬಂಧಿಕರು, ಸ್ನೇಹಿತರು, ಮತ್ತು ಆತನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರ ಮಾಹಿತಿಗಳನ್ನು ಕಲೆಹಾಕಿ ಅವರೆಲ್ಲರ ಮನೆಗಳನ್ನೂ ಶೋಧಿಸಲು ಸೂಚಿಸಿದರು.

    ಪೊಲೀಸರು ಮನೆಗೆ ಬಂದದ್ದನ್ನು ಕಂಡು ಸುಶೀಲ್​ನ ವೃದ್ಧ ಮಾತಾಪಿತರು ಭಯಭೀತರಾದರು. ‘ಎರಡು ದಿನಗಳ ಹಿಂದೆಯೇ ಸುಶೀಲ್ ಚಂಡಿಗಢಕ್ಕೆ ಹೋಗುವುದಾಗಿ ನಮಗೆ ತಿಳಿಸಿದ್ದ. ಆತ ಇಲ್ಲಿಗೆ ಬಂದಿಲ್ಲ’ ಎಂದರು. ಆದರೂ ಪೊಲೀಸರು ಮನೆಯನ್ನು ಶೋಧಿಸಿ ಸುಶೀಲ್ ಅಲ್ಲಿಲ್ಲದಿದ್ದುದನ್ನು ಖಾತ್ರಿಮಾಡಿಕೊಂಡರು. ನಂತರ ಸುಶೀಲ್ ಶರ್ಮಾ ನೈನಾಳ ಜತೆ ಎಲ್ಲಿ ವಾಸಿಸುತ್ತಿದ್ದನೆಂದು ಕೇಶವ್ ಕುಮಾರ್​ನನ್ನು ವಿಚಾರಿಸಿದರು. ಆತ ವಿಳಾಸ ತನಗೆ ಗೊತ್ತಿಲ್ಲವೆಂದು ತಿಳಿಸಿ ಆ ಮನೆಯ ಒಂದು ಕೋಣೆಗೆ ಏರ್ ಕಂಡಿಷನರ್ ಲಗತ್ತಿಸಲಾಗಿದೆ. ನೈನಾಳ ಜತೆಗಿನ ತನ್ನ ಲಗ್ನದ ವಿಷಯ ಇತರರಿಗೆ ತಿಳಿಯಬಾರದೆಂದೇ ಸುಶೀಲ್ ಈ ಅಪಾರ್ಟ್​ವೆುಂಟನ್ನು ಬಾಡಿಗೆಗೆ ಹಿಡಿದಿದ್ದ ಎಂದ. ಕೇಶವ್ ನೀಡಿದ ಸುಳಿವಿನ ಮೇರೆಗೆ ಪೊಲೀಸ್ ತಂಡವು ಸುಶೀಲ್ ಶರ್ಮಾ ವಾಸಿಸುತ್ತಿದ್ದ ಮನೆಯನ್ನು ಪತ್ತೆ ಮಾಡಿತು. ಮನೆಯ ಮುಂಬಾಗಿಲಿಗೆ ಬೀಗ ಹಾಕಲಾಗಿತ್ತು.

    ಪೊಲೀಸ್ ಅಧಿಕಾರಿಗಳು ಬೀಗ ಒಡೆದು ಅಪಾರ್ಟ್​ವೆುಂಟ್ ಒಳಗಡೆ ಹೋದಾಗ ಮನೆಯ ನೆಲವನ್ನು ಅವಸರವಸರವಾಗಿ ನೀರಿನಿಂದ ಸಾರಿಸಿದ್ದು ಕಂಡಿತು. ನೆಲದಲ್ಲಿ ಅಲ್ಲಲ್ಲಿ ರಕ್ತದ ಕಲೆಗಳು ಕಂಡು ಬಂದವು. ಆ ಕೋಣೆಯ ಗೋಡೆಯೊಂದರ ಮೇಲೆ ಪಿಸ್ತೂಲಿನಿಂದ ಹೊರಬಂದ ಗುಂಡೊಂದರ ಗುರುತಿತ್ತು. ಏರ್ ಕಂಡೀಷನರ್ ಅಳವಡಿಸಿದ್ದ ಮರದ ಫ್ರೇಂನ ಒಳಗೆ ಒಂದು ಬುಲೆಟ್ ಹೊಕ್ಕಿತ್ತು. ಇನ್ನೆರಡು ಬುಲೆಟ್​ಗಳ ಹೊರಗಿನ ಕವಚಗಳು ಬೆಡ್​ರೂಂನ ಕಾರ್ಪೆಟ್​ನ ಮೇಲೆ ಬಿದ್ದಿದ್ದವು. ಡ್ರೆಸಿಂಗ್ ಟೇಬಲ್ ಪಕ್ಕದಲ್ಲಿದ್ದ ಒಂದು ಗಾಜಿನ ಬೌಲ್​ನಲ್ಲಿ ಖಾಲಿಯಾದ ನಾಲ್ಕು ಗುಂಡುಗಳ ಕವಚಗಳಿದ್ದವು. ಆರು ಗುಂಡುಗಳನ್ನು ಹೊಡೆಯಲಾಗಿದೆಯೆಂದು ಅರಿವಾಗುತ್ತಿತ್ತು.

    ಬೆಡ್​ರೂಂನ ಕಾರ್ಪೆಟ್ ಮೇಲೆ ರಕ್ತ ಸುರಿದು ಹೆಪ್ಪುಗಟ್ಟಿತ್ತು. ಆ ರಕ್ತಕ್ಕೆ ಕೆಲವು ತಲೆಕೂದಲುಗಳು ಅಂಟಿದ್ದವು. ಮಂಚದ ಮೇಲಿದ್ದ ಹಾಸಿಗೆಗೆ ಬೆಡ್​ಷೀಟ್ ಇರಲಿಲ್ಲ. ಹಾಸಿಗೆ ರಕ್ತದಿಂದ ಮಡುಗಟ್ಟಿತ್ತು. ಕೋಣೆಯ ಕಪಾಟು, ಮರದ ರ್ಯಾಕ್ ಮತ್ತು ಕುರ್ಚಿಯ ಮೇಲೆಯೂ ರಕ್ತದ ಕಲೆಗಳು ಇದ್ದವು. ಬಾತ್​ರೂಂನಲ್ಲಿ ರಕ್ತಸಿಕ್ತ ಬಟ್ಟೆಯೊಂದನ್ನು ಎಸೆಯಲಾಗಿತ್ತು. ಬೆಡ್​ರೂಂನ ಟೇಬಲಿನ ಮೇಲೆ ಖಾಲಿ ಗಾಜಿನ ಲೋಟದಲ್ಲಿ ಕುಡಿದು ಉಳಿದಿದ್ದ ಸ್ವಲ್ಪ ಟೊಮಾಟೋ ಸೂಪ್ ಇತ್ತು. ಆ ಲೋಟದ ಪಕ್ಕದಲ್ಲಿ ವೋದ್ಕಾ ಮದ್ಯದ ಖಾಲಿ ಬಾಟಲಿ ಇತ್ತು. ಕೊಲೆಗೂ ಮುನ್ನ ಪತಿ-ಪತ್ನಿ ಮದ್ಯಪಾನ ಮಾಡಿ ಆನಂತರ ಜಗಳವಾಡಿರಬಹುದೆಂದು ಊಹಿಸಬಹುದಾಗಿತ್ತು.

    ಮಂದಿರ್ ಮಾರ್ಗ್ ಮನೆಯಲ್ಲಿ ಸಿಕ್ಕ ಒಂದು ಕಾಗದದಲ್ಲಿ ನೈನಾಳ ಮಾತಾ-ಪಿತರು ದೆಹಲಿಯಲ್ಲಿಯೇ ವಾಸಿಸುತಿದ್ದ ಅಂಶ ಬೆಳಕಿಗೆ ಬಂದಿತು. ತನಿಖಾಧಿಕಾರಿ ನಿರಂಜನ್ ಸಿಂಗ್, ನೈನಾಳ ತಂದೆಯ ಮನೆಗೆ ಹೋದರು. ನೈನಾಳ ಕೊಲೆಯಾಗಿರಬಹುದೆಂಬ ಸಂಶಯ ತಮಗಿದೆ ಎಂದು ತಿಳಿಸಿದಾಗ ಗಾಬರಿಗೊಂಡ ನೈನಾಳ ತಾಯಿ, ‘ನಿಮಗೆ ತಪ್ಪುಕಲ್ಪನೆಯಾಗಿರುವ ಸಾಧ್ಯತೆಯಿದೆ. ನೈನಾ ದೆಹಲಿಯಲ್ಲಿ ಇಲ್ಲ, ಮೂರು ದಿನಗಳ ಹಿಂದೆ ನಮ್ಮನ್ನು ಭೇಟಿಯಾಗಿ ತಾನು ಕುಲು ಮನಾಲಿಗೆ ಹೋಗುತ್ತಿರುವುದಾಗಿ ತಿಳಿಸಿದ್ದಳು’ ಎಂದರು. ಸುಶೀಲ್ ಶರ್ಮಾ ಮತ್ತು ನೈನಾ ಮದುವೆಯ ನಂತರ ಮಂದಿರ್ ಮಾರ್ಗ್ ಫ್ಲಾಟಿನಲ್ಲಿ ವಾಸಿಸುತ್ತಿದ್ದರು ಎಂದು ಅವರು ತಿಳಿಸಿದರು.

    ಅವರಿಗೆ ನಡೆದಿದ್ದ ಘಟನೆಗಳನ್ನು ವಿವರಿಸಿದ ತನಿಖಾಧಿಕಾರಿ, ತಂದೂರ್​ನಲ್ಲಿ ಸಿಕ್ಕ ಮೃತದೇಹವನ್ನು ಗುರುತಿಸಲು ಬರುವಂತೆ ಕೋರಿದಾಗ ಅವರು ಒಪ್ಪಲಿಲ್ಲ. ಹೋಗಲಿ, ಮಂದಿರ್ ಮಾರ್ಗ್ ಮನೆಗಾದರೂ ಬಂದು ಅದೇ ನಿಮ್ಮ ಮಗಳಿದ್ದ ಮನೆಯೆಂದು ಗುರುತಿಸಿ ಎಂದು ಅವರ ಮನವೊಲಿಸಿದಾಗ ನೈನಾಳ ಮಾತಾ-ಪಿತರು, ಅವಳ ಇಬ್ಬರು ಸೋದರರು ಮತ್ತು ಅತ್ತಿಗೆ ಗುರುಬಚನ್ ಕೌರ್, ಪೊಲೀಸರ ಜತೆಗೆ ಮನೆಗೆ ಬಂದರು. ಆ ಮನೆಯ ಸ್ಥಿತಿ ಕಂಡ ಕೂಡಲೇ ಎಲ್ಲರೂ ಆಘಾತಗೊಂಡದ್ದನ್ನು ಪೊಲೀಸರು ಗಮನಿಸಿದರು. ನಂತರ ಆಸ್ಪತ್ರೆಯ ಶವಾಗಾರಕ್ಕೆ ಬಂದು ಅಲ್ಲಿದ್ದ ದೇಹವು ನೈನಾಳದ್ದೇ ಅಲ್ಲವೇ ಎಂದು ಗುರುತಿಸಬೇಕೆಂದು ತನಿಖಾಧಿಕಾರಿ ಕೋರಿದಾಗ ನೈನಾಳ ಕುಟುಂಬ ಒಪ್ಪಲಿಲ್ಲ. ಆದರೂ ಅವರನ್ನು ವಿನಂತಿಸಿ ಶವಾಗಾರಕ್ಕೆ ಕರೆತರಲಾಯಿತು. ಮೃತದೇಹದ ಮೇಲೆ ಹೊದಿಸಿದ್ದ ಬಟ್ಟೆ ತೆಗೆದಾಗ ಎಲ್ಲರ ಕಣ್ಣಂಚಿನಲ್ಲಿಯೂ ನೀರು ಮೂಡಿತು. ನೈನಾಳ ತಾಯಿ ರೋದಿಸತೊಡಗಿದರು. ಆದರೂ ಶವವು ನೈನಾಳದ್ದು ಎಂದವರು ಖಚಿತವಾಗಿ ಗುರುತಿಸಲಿಲ್ಲ. ಆಗ ಅವರಿಗೆ ತಂದೂರಿಯ ಬೂದಿಯಲ್ಲಿ ಸಿಕ್ಕಿದ್ದ ಬೆಳ್ಳಿಯ ಕಾಲು ಚೈನುಗಳನ್ನು ತನಿಖಾಧಿಕಾರಿ ತೋರಿಸಿದರು. ನೈನಾಳ ಅತ್ತಿಗೆ, ಇಂತಹದೇ ಬಗೆಯ ಕಾಲು ಚೈನುಗಳು ನೈನಾಳ ಬಳಿಯಿದ್ದವು ಎಂದು ಹೇಳಿದರಾದರೂ ಮೃತದೇಹವು ನೈನಾಳದ್ದೇ ಎಂದು ಹೇಳಲು ಅವರೆಲ್ಲರೂ ನಿರಾಕರಿಸಿದರು. ಈ ಶವವು ನೈನಾಳದ್ದು ಎಂದು ಸುಶೀಲ್ ಹೇಳಿದರೆ ಮಾತ್ರ ನಾವು ಒಪ್ಪುತ್ತೇವೆ, ಎಂದು ಅವರು ಹೇಳಿದಾಗ ದಿಗ್ಭಾ›ಂತಗೊಂಡ ತನಿಖಾಧಿಕಾರಿ, ಅವರೆಲ್ಲ ಸುಶೀಲ್​ನ ಹೆದರಿಕೆಯಿಂದಲೇ ನೈನಾಳ ದೇಹವನ್ನು ಗುರುತಿಸಲು ಹಿಂದೇಟು ಹಾಕುತ್ತಿದ್ದಾರೆಂದು ಭಾವಿಸಿದರು.

    ಮುಂದೇನು ಮಾಡುವುದೆಂದು ತನಿಖಾಧಿಕಾರಿಗೆ ತೋಚದಾದಾಗ ಅವರಿಗೆ ನೈನಾಳ ಜೊತೆ ಸಂಬಂಧವನ್ನಿಟ್ಟುಕೊಂಡಿದ್ದ ಮತಲೂಬ್ ಕರೀಂ ನೆನಪಾದ. ಅವನನ್ನು ಸಂರ್ಪಸಿ ಶವಾಗಾರಕ್ಕೆ ಕರೆತಂದಾಗ, ಬಿಕ್ಕಿ ಬಿಕ್ಕಿ ಅಳತೊಡಗಿದ ಆತ ಶವದ ಮೂಗು, ಹಣೆ, ಕೂದಲು ಮತ್ತು ಧರಿಸಿದ್ದ ಬೆಳ್ಳಿಯ ಕಾಲು ಚೈನುಗಳಿಂದ ಅದು ನೈನಾಳದ್ದೇ ಎನ್ನುವುದರಲ್ಲಿ ಸಂದೇಹ ಇಲ್ಲವೆಂದ. ಇತ್ತೀಚಿಗೆ ಸುಶೀಲ್ ಮತ್ತು ನೈನಾಳ ಸಂಬಂಧ ಹಳಸಿತು. ಪ್ರತಿದಿನವೂ ಜಗಳವಾಡುತ್ತಿದ್ದರು. ಸುಶೀಲ್ ನೈನಾಳನ್ನು ದೈಹಿಕವಾಗಿ ಹಿಂಸಿಸುತ್ತಿದ್ದ, ಇದರಿಂದ ಆಕೆ ಜರ್ಜರಿತಳಾಗಿದ್ದಳು ಎಂದ. ಶವದ ನಿಖರ ಗುರುತು ಪತ್ತೆಯಾದನಂತರ ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು.

    ಕೊಲೆಯಾದ 2 ದಿನಗಳ ನಂತರ, ಜುಲೈ 4ರ ಬೆಳಿಗ್ಗೆ ದೆಹಲಿಯ ಚಾಣಕ್ಯಪುರಿ ಬಡಾವಣೆಯ ರಸ್ತೆಯೊಂದರಲ್ಲಿ ಬಿಳಿಯ ಮಾರುತಿ ಕಾರು ನಿಂತದ್ದನ್ನು ಬೀಟ್ ಪೊಲೀಸನೊಬ್ಬ ಕಂಡ. ಆ ಬಗ್ಗೆ ವಿಚಾರಿಸಿದಾಗ ಅದೇ ಸುಶೀಲ್ ಶರ್ವನ ಕಾರೆಂದು ಖಾತ್ರಿಯಾಯಿತು. ನಂತರ ತನಿಖಾಧಿಕಾರಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳನ್ನು ಬರಮಾಡಿಕೊಂಡು ಪಂಚರ ಸಮ್ಮುಖದಲ್ಲಿ ಕಾರಿನ ಬಾಗಿಲನ್ನು ತೆರೆಸಿದರು. ಕಾರಿನ ಡಿಕ್ಕಿಯಲ್ಲಿ ಒಣಗಿದ ರಕ್ತದ ಕಲೆಗಳೂ ಕೆಲವು ಕೂದಲೆಳೆಗಳೂ ಸಿಕ್ಕವು. ಇವೆಲ್ಲವನ್ನೂ ಜಪ್ತು ಮಾಡಿ ಮುಂದಿನ ತನಿಖೆಗಾಗಿ ವಿಧಿವಿಜ್ಞಾನ ತಜ್ಞರು ಒಯ್ದರು. ಅದೇ ಕಾರಿನಲ್ಲಿ ಶವವೊಂದನ್ನು ತೆಗೆದುಕೊಂಡು ಹೋಗಿದ್ದಿರಬಹುದೆಂದು ಊಹಿಸಲಾಯಿತು.

    ಪರಾರಿಯಾಗಿದ್ದ ಸುಶೀಲ್ ಜುಲೈ 7ರಂದು ಮದ್ರಾಸ್​ನ ಸೆಷನ್ಸ್ ನ್ಯಾಯಾಲಯವೊಂದರಲ್ಲಿ ನಿರೀಕ್ಷಣಾ ಜಾಮೀನನ್ನು ಪಡೆದ. ಇದನ್ನರಿತ ದೆಹಲಿ ಪೊಲೀಸರ ತಂಡವು ಮದ್ರಾಸ್​ಗೆ ಧಾವಿಸಿ ಸುಶೀಲ್​ಗೆ ಕೊಟ್ಟ ಜಾಮೀನನ್ನು ರದ್ದುಗೊಳಿಸಬೇಕೆಂದು ಅಲ್ಲಿನ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತು. ಉಚ್ಚ ನ್ಯಾಯಾಲಯವು ಸುಶೀಲ್ ಶರ್ವನ ಜಾಮೀನನ್ನು ರದ್ದುಪಡಿಸುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾದ.

    ಜುಲೈ 9ರಂದು ಸುಶೀಲ್ ಶರ್ಮಾ ತನ್ನ ವಕೀಲರೊಂದಿಗೆ ಬೆಂಗಳೂರಿಗೆ ಬಂದು ಹೋಟೆಲೊಂದರಲ್ಲಿ ತಂಗಿದ. ಮಾರನೆಯ ದಿನ ಆತ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಹಾಜರಾಗಿ ತಾನು ನ್ಯಾಯಾಲಯಕ್ಕೆ ಶರಣಾಗಬೇಕೆಂದು ಬಯಸಿದ್ದೇನೆಂದು ಅರ್ಜಿ ಸಲ್ಲಿಸಿದ. ಆದರೆ, ಆ ಅರ್ಜಿ ವಜಾಗೊಂಡಿತು. ಹೀಗಾಗಿ ಆತ ತನ್ನ ವಕೀಲರೊಂದಿಗೆ ಬೆಂಗಳೂರಿನ ಪೊಲೀಸ್ ಆಯುಕ್ತರ ಮುಂದೆ ಶರಣಾಗಲು ಅವರ ಕಚೇರಿಗೆ ಹೋದ. ಆಯುಕ್ತರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರಿಂದ ಅವರು ಶರ್ವನನ್ನು ಕಾಣಲಿಲ್ಲ. (ಮುಂದುವರಿಯುವುದು)

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts