ಸಿನಿವಾಣಿ

ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ದುರಂತ: ಹೆದರಿ ಕೋರ್ಟ್ ಮೊರೆ ಹೋದ ನಟ ಅಜಯ್ ರಾವ್!​

ರಾಮನಗರ: ಲವ್ ಯು ರಚ್ಚು ಸಿನಿಮಾ ಶೂಟಿಂಗ್​ ವೇಳೆ ಫೈಟರ್​ ದುರಂತ ಸಾವು ಪ್ರಕರಣದಲ್ಲಿ ಮುಂದೆ ಕಾನೂನು ಸಂಕಷ್ಟ ಎದುರಾಗಬಹುದು ಎಂಬ ಆಲೋಚನೆಯಿಂದ ನಟ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಅಜಯ್​ ರಾವ್​ ಅರ್ಜಿ ಸಲ್ಲಿಸಿದ್ದು, ನಾಳೆ (ಆ. 26) ಅವರ ಅರ್ಜಿ ವಿಚಾರಣೆ ನಡೆಯಲಿದೆ. ಪ್ರಕರಣದಲ್ಲಿ ಏನಾದರೂ ಸಮಸ್ಯೆ ಆಗಬಹುದೆಂದು ಹೆದರಿ ನಟ ಅಜಯ್​ ಕೋರ್ಟ್ ಮೊರೆ ಹೋಗಿದ್ದಾರೆ.

ಬಿಡದಿಯ‌ ಜ್ಯೋಗಯ್ಯನಪಾಳ್ಯ ಗ್ರಾಮದಲ್ಲಿ‌ ಯಾವುದೇ ಅನುಮತಿ ಪಡೆಯದೇ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ವಿವೇಕ್ ಎಂಬ ಕಲಾವಿದ ಮೃತಪಟ್ಟಿದ್ದರು. ಕೇಸು ದಾಖಲಿಸಬಹುದು ಎಂದು ಅಜಯ್​ ರಾವ್​ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದಾರೆ.

ಈಗಾಗಲೇ ನಟಿ ರಚಿತಾ ರಾಮ್​ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ಅಂದು ಘಟನೆ ನಡೆದ ಸಂದರ್ಭ ನಾನು ಸ್ಥಳದಲ್ಲಿ ಇರಲಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ತಿಳಿದುಕೊಂಡೆ. ಆವತ್ತು ನಾನು ಅಲ್ಲಿರಲೇ ಇಲ್ಲ ಎಂದು ಸ್ಪಷ್ಟಪಡಿಸಿದ ರಚಿತಾ, ಚಿತ್ರದಲ್ಲಿ ಕೇವಲ ನಾಯಕ ನಾಯಕಿಗೆ ಮಾತ್ರವಲ್ಲ, ಫೈಟ್ ಮಾಡುವವರಿಗೂ ಅಷ್ಟೇ ಪ್ರಾಧಾನ್ಯತೆ ಕೊಡಬೇಕು. ದುರಂತ ನಡೆಯುವ ಹಿಂದಿನ ದಿನಗಳ ಶೂಟಿಂಗ್ ವೇಳೆ ನಾನು ಸ್ಥಳದಲ್ಲಿ ಇದ್ದೆ. ಆದರೆ ಘಟನೆ ನಡೆದ‌ ದಿನ ಸ್ಥಳದಲ್ಲಿ ನಾನು ಇರಲಿಲ್ಲ. ನಾನು ಸ್ಥಳದಲ್ಲಿ ಇದ್ದಿದ್ದರೆ ಖಂಡಿತ ಏನು ನಡೆಯಿತು ಎಂದು ವಿವರಿಸುತ್ತಿದ್ದೆ ಎಂದರು.

ಘಟನೆ ಹಿನ್ನೆಲೆ

ನಟ ಅಜಯ್ ರಾವ್ ಮತ್ತು ನಟಿ ರಚಿತ ರಾಮ್ ನಟನೆಯ ‘ಲವ್​ ಯೂ ರಚ್ಚು’ ಕನ್ನಡ ಸಿನಿಮಾ ಶೂಟಿಂಗ್ ಆಗಸ್ಟ್​ 9ರಂದು ರಾಮನಗರದ ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ನಡೆಯುತ್ತಿತ್ತು. ಈ ವೇಳೆ ವಿದ್ಯುತ್​ ಅವಘಡ ಸಂಭವಿಸಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಈ ಪೈಕಿ ಫೈಟರ್​ ತಮಿಳುನಾಡು ಮೂಲದ ​ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬನಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಚಿತ್ರೀಕರಣ ವೇಳೆ ಮೆಟಲ್​ ರೋಪ್​ ಬಳಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಹೈ ಟೆನ್ಶನ್​ ತಂತಿಗೆ ತಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಅವಘಡ ಸಂಭವಿಸುತ್ತದ್ದಂತೆ ಚಿತ್ರೀಕರಣ ನಿಲ್ಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)