ವಿವೇಕ್​ ಸಾವಿನ ಬೆನ್ನಲ್ಲೇ ಅಭಿಮಾನಿಗಳನ್ನು ಕೆರಳಿಸಿದ ರಚಿತಾ ರಾಮ್​ ಪೋಸ್ಟ್​! ನೀವು ಮಾಡಿದ್ದು ಸರಿನಾ ರಚ್ಚು?

Rachu
Published on

ರಾಮನಗರ: ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಸೋಮವಾರ ಫೈಟರ್​ ವಿವೇಕ್​(35) ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಮಾತನ್ನೂ ಆಡದೆ ಇನ್​ಸ್ಟಾಗ್ರಾಂನಲ್ಲಿ ತಮ್ಮ ಫೋಟೋ ಪೋಸ್ಟ್​ ಮಾಡಿದ ನಟಿ ರಚಿತಾ ರಾಮ್​ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ರಚಿತಾ ರಾಮ್​ ವಿರುದ್ಧ ತಿರುಗಿ ಬಿದ್ದ ಅಭಿಮಾನಿಗಳು
ತಮ್ಮದೇ ಚಿತ್ರದ ಶೂಟಿಂಗ್​ ಅವಘಡದಿಂದ ಫೈಟ್​ ಮಾಸ್ಟರ್​​ ಸಾವಿಗೀಡಾಗಿದ್ದರೆ. ಆದರೆ, ರಚಿತಾ ರಾಮ್ ಇಂದು​ ಇನ್​ಸ್ಟಾಗ್ರಾಂನಲ್ಲಿ ತಮ್ಮ ಪೋಟೋವನ್ನು ಪೋಸ್ಟ್​ ಮಾಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ನಿಮ್ಮ ಸಿನಿಮಾದಲ್ಲಿ ಅವಘಡ ಸಂಭವಿಸಿದ್ದರೆ, ನೀವು ನಿಮ್ಮ ಫೋಟೋ ಪೋಸ್ಟ್​ ಮಾಡಿದ್ದೀರಲ್ಲ ನಾಚಿಕೆ ಆಗ್ಬೇಕು. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಟೀಕೆಗಳ ಬೆನ್ನಲ್ಲೇ ಸಾಂತ್ವಾನದ ಮಾತು
ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಇನ್​ಸ್ಟಾಗ್ರಾಂನಲ್ಲಿ ಮತ್ತೊಂದು ಪೋಸ್ಟ್​ ಮಾಡಿರುವ ರಚಿತಾ ರಾಮ್​, ವಿದ್ಯುತ್​ ಅವಘಡದಿಂದ ಸಾವಿಗೀಡಾದ ಫೈಟರ್​ ವಿವೇಕ್​ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಹೇಳಿದ್ದಾರೆ.

ನಟ ಅಜಯ್ ರಾವ್ ಮತ್ತು ನಟಿ ರಚಿತ ರಾಮ್ ನಟನೆಯ ‘ಲವ್​ ಯೂ ರಚ್ಚು’ ಕನ್ನಡ ಸಿನಿಮಾ ಶೂಟಿಂಗ್ ಸೋಮವಾರ ರಾಮನಗರದ ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ನಡೆಯುತ್ತಿತ್ತು. ಈ ವೇಳೆ ವಿದ್ಯುತ್​ ಅವಘಡ ಸಂಭವಿಸಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಈ ಪೈಕಿ ಫೈಟರ್​ ತಮಿಳುನಾಡು ಮೂಲದ ​ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬನಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಚಿತ್ರೀಕರಣ ವೇಳೆ ಮೆಟಲ್​ ರೋಪ್​ ಬಳಸಿದ್ದೇ ಅವಘಡಕ್ಕೆ ಕಾರಣ. ಹೈ ಟೆನ್ಶನ್​ ತಂತಿಗೆ ತಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ. ಅವಘಡ ಸಂಭವಿಸುತ್ತದ್ದಂತೆ ಚಿತ್ರೀಕರಣ ನಿಲ್ಲಿಸಲಾಗಿದೆ.

ಪ್ರಕರಣ ಸಂಬಂಧ ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಸಾಹಸ ಕಲಾವಿದ ವಿನೋದ್ ಹಾಗೂ ಕ್ರೇನ್ ಚಾಲಕ ಮುನಿಯಪ್ಪನ್ನು ಬಿಡದಿ ಪೊಲೀಸರು ಬಂಧಿಸಿದ್ದು, ಮೂವರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net