More

    ಬಿಡದಿ ಇನ್‌ಸ್ಪೆಕ್ಟರ್ ಅಮಾನತು; ಸಿಸಿಬಿ ಬಲೆಗೆ ಏಜೆಂಟ್

    ಬೆಂಗಳೂರು: ಸುಳ್ಳು ಕೇಸ್ ದಾಖಲಿಸಿ 72 ಲಕ್ಷ ರೂ. ದುರ್ಬಳಕೆ ಮಾಡಿಕೊಂಡ ಆರೋಪ ಪ್ರಕರಣದಲ್ಲಿ ಬಿಡದಿ ಇನ್‌ಸ್ಪೆಕ್ಟರ್ ಜಿ.ಕೆ. ಶಂಕರ್ ನಾಯಕ್‌ರನ್ನು ಸೇವೆಯಿಂದ ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. ಮತ್ತೊಂದೆಡೆ, ಪ್ರಕರಣದ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು, ಏಜೆಂಟ್‌ನನ್ನು ಬಂಧಿಸಿದ್ದಾರೆ.

    ಕುದೂರಿನ ಲೋಕನಾಥ್ ಸಿಂಗ್ ಬಂಧಿತ. ಈತ ದೂರುದಾರ ಉದ್ಯಮಿ ಹರೀಶ್ ಎಂಬಾತನನ್ನು ಕರೆತಂದು ಇನ್‌ಸ್ಪೆಕ್ಟರ್‌ಗೆ ಪರಿಚಯ ಮಾಡಿಕೊಟ್ಟು ಡೀಲ್ ಕುದುರಿಸಿದ್ದ. ಇದರ ಮೇರೆಗೆ ಪ್ರಕರಣದಲ್ಲಿ 2ನೇ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2022ರಲ್ಲಿ ಬ್ಯಾಟರಾಯನಪುರ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದಾಗ ಶಂಕರ್ ನಾಯಕ್ ಬಳಿಗೆ ದಲ್ಲಾಳಿ ಲೋಕನಾಥ್ ಸಿಂಗ್ ಬಂದು ಉದ್ಯಮಿ ಹರೀಶ್‌ನನ್ನು ಪರಿಚಯ ಮಾಡಿಸಿದ್ದ. ಅಲ್ಲದೆ, ಉದ್ಯಮಿ ಕಾರು ಚಾಲಕ ಸಂತೋಷ್ ಎಂಬಾತ ಹರೀಶ್‌ಗೆ ಸೇರಿದ 72 ಲಕ್ಷ ರೂ. ಕಳವು ಮಾಡಿದ್ದು, ರಿಕವರಿ ಮಾಡಿಕೊಡುವಂತೆ ಕೋರಿದ್ದ.

    ಸಹಾಯ ಮಾಡುವ ನೆಪದಲ್ಲಿ ಶಂಕರ್ ನಾಯಕ್, 20 ಲಕ್ಷ ರೂ. ಕಮಿಷನ್ ಮಾತನಾಡಿ 72 ಲಕ್ಷ ರೂ. ಅನ್ನು ಸಂತೋಷ್ ಕಡೆಯಿಂದ ರಿಕವರಿ ಮಾಡಿದ್ದರು. ಕೃತ್ಯ ಬೇರೆಡೆ ನಡೆದಿದ್ದರೂ ಸಂತೋಷ್ ವಿರುದ್ಧ ಎ್ಐಆರ್ ಮಾಡಿದ್ದರು. ಅದರಲ್ಲಿಯೂ ಇನ್‌ಸ್ಪೆಕ್ಟರ್ ತಾನೇ ಕನ್ನಡದಲ್ಲಿ ದೂರು ಬರೆದು ಉದ್ಯಮಿಗೆ ಸಹಿ ಮಾಡುವಂತೆ ಕೋರಿದ್ದರು. ಕನ್ನಡದಲ್ಲಿ ದೂರು ಇದ್ದ ಕಾರಣಕ್ಕೆ ಓದಲು ಬರುವುದಿಲ್ಲ ಮತ್ತು ಕೃತ್ಯ ಬೇರೆಡೆ ನಡೆದಿದೆ. ಇದಕ್ಕೆ ಸಹಿ ಮಾಡುವುದಿಲ್ಲ ಎಂದು ನಿರಾಕರಿಸಿದಾಗ ಉದ್ಯಮಿಯ ಸ್ನೇಹಿತ ಜಾನ್ ಕಡೆಯಿಂದ ಸಹಿ ಪಡೆದು ಎ್ಐಆರ್ ದಾಖಲಿಸಿದ್ದರು. ಆದರೆ, ಜಪ್ತಿ ಮಾಡಿದ್ದ 72 ಲಕ್ಷ ರೂ. ಅನ್ನು ಖಜಾನೆಗೆ ಅಥವಾ ಕೋರ್ಟ್‌ಗೆ ಜಮೆ ಮಾಡದೆ ಮಹಜರ್ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದರು.

    ಈ ವಿಷಯ ಅರಿತ ಡಿಸಿಪಿ, ಪ್ರಕರಣದ ತನಿಖೆಯನ್ನು ಕೆಂಗೇರಿ ಗೇಟ್ ಉಪವಿಭಾಗ ಎಸಿಪಿಗೆ ವಹಿಸಿದ್ದರು. ಆದರೂ ಕೇಸ್ ದಾಖಲೆ ಕೊಡದೆ ನಿರ್ಲಕ್ಷ್ಯ ವಹಿಸಿದ್ದರು. ಅಷ್ಟೊತ್ತಿಗೆ ಶಂಕರ್ ನಾಯಕ್ ಬಿಡದಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ಇವರ ಜಾಗಕ್ಕೆ ಬಂದ ಇನ್‌ಸ್ಪೆಕ್ಟರ್ ನಿಂಗನಗೌಡ ಎ. ಪಾಟೀಲ್, ಅಧಿಕಾರ ಸ್ವೀಕರಿಸುವಾಗ ಜಪ್ತಿಯಾದ ಹಣ ಇರದೆ ಇದ್ದಾಗ ಎಸಿಪಿಗೆ ಮತ್ತೆ ದೂರು ನೀಡಿದ್ದರು. ಇದರ ನಡುವೆ ಶಂಕರ್ ನಾಯಕ್, 72 ಲಕ್ಷ ರೂ. ಠಾಣೆಗೆ ತಂದು ಕೊಟ್ಟಿದ್ದರು. ಜಪ್ತಿ ಮಾಡಿದ್ದ ಹಣವೇ ಬೇರೆ. ವಾಪಸ್ ಕೊಟ್ಟ ಹಣವೇ ಬೇರೆ ಆಗಿದ್ದರಿಂದ ಕೆಂಗೇರಿ ಗೇಟ್ ಎಸಿಪಿ ಭರತ್ ರೆಡ್ಡಿ , ತನಿಖೆ ನಡೆಸಿ ಪೊಲೀಸ್ ಆಯುಕ್ತರಿಗೆ ವರದಿ ಒಪ್ಪಿಸಿದ್ದರು. ಅಲ್ಲದೆ, ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ನಾಯಕ್ ಇತರರ ವಿರುದ್ಧ ಎ್ಐಆರ್ ಸಹ ದಾಖಲಿಸಿದ್ದರು. ಹೆಚ್ಚಿನ ತನಿಖೆ ಸಲುವಾಗಿ ಸಿಸಿಬಿಗೆ ಪ್ರಕರಣ ವರ್ಗಾಯಿಸಿ ಪೊಲೀಸ್ ಇಲಾಖೆ ಆದೇಶಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts