ಸಿನಿವಾಣಿ

ಅಪ್ಪುಗೆ ಅವಮಾನ.. ರಚಿತಾ ರಾಮ್​ ಕ್ಷಮೆಯಾಚಿಸಿದ್ರೂ ಅಭಿಮಾನಿಗಳಿಂದ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಪ್ರೇಮ್​ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ 3ನೇ ಸಾಂಗ್ ರಿಲೀಸ್ ವೇಳೆ ಅಪ್ಪು ಫೋಟೋ ಮುಂದೆ ನಡೆದ ದೊಡ್ಡ ಪ್ರಮಾದದ ಕುರಿತು ನಟಿ ರಚಿತಾ ರಾಮ್​ ಪುನೀತ್​ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ಪೋಸ್ಟ್​​ ಮಾಡಿರುವ ರಚಿತಾ ರಾಮ್​, ನಿನ್ನೆ ಏಕ್​ ಲವ್​ ಯಾ ಲಾಂಚ್​ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರದ ಎದುರು ಶಾಂಪೇನ್​ ಬಾಟಲ್​ ಓಪನ್​ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನವಾಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಆದಾಗ್ಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ ಎಂದು ರಚಿತಾ ಕ್ಷಮೆಯಾಚಿಸಿದ್ದಾರೆ.

ಇನ್ನು ರಚಿತಾ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ರಚಿತಾ ಬೆನ್ನಿಗೆ ನಿಂತರೆ, ಇನ್ನು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಆವಾಗಲೇ ಗೊತ್ತಿರಲಿಲ್ಲ ನಿಮ್ಗೆ ಇದು ತಪ್ಪು ಅಂತಾ... ಅಡಿಕೆಗೆ ಹೋದ ಆನೆ ಕೊಟ್ಟರು ಬರದು ಎಂದು ನೆಟ್ಟಿಗರೊಬ್ಬರ ಕಮೆಂಟಿಸಿದ್ದಾರೆ. ಮಾಡಿದ್ದೆಲ್ಲ ಮಾಡಿ ಈಗ ಕ್ಷಮೆ ಕೇಳುತ್ತೀರಾ ಎಂದು ಕಿಡಿಕಾರಿದ್ದಾರೆ. ನೀವು ಮಾಡಿದ್ದು ತಪ್ಪು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗಿದ್ದೇನು?

ನಿನ್ನೆ ‘ಏಕ್ ಲವ್ ಯಾ’ ಸಿನಿಮಾದ 3ನೇ ಸಾಂಗ್ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ವೇಳೆ ವೇದಿಕೆಯಲ್ಲಿ ಅಪ್ಪು ಫೋಟೋಗೆ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರತಂಡ, ಬಳಿಕ ಅದೇ ಫೋಟೋ ಮುಂದೆಯೇ ಹುಡುಗಿಯರ ಕೈಯಲ್ಲಿ ಶಾಂಪೇನ್ ಬಾಟಲಿ ಓಪನ್ ಮಾಡಿಸಿ ಎಂಜಾಯ್​ ಮಾಡಿದ್ದಾರೆ. ಕುಡಿತ ಹಾಗೂ ವ್ಯಸನಗಳನ್ನ ತಮ್ಮ ಸಿನಿಮಾದಲ್ಲೂ ತೋರಿಸಲು ಅಪ್ಪು ಇಷ್ಟ ಪಡ್ತಾಯಿರಲಿಲ್ಲ. ಅಂಥವರ ಫೋಟೋ ಮುಂದೆ ಹುಡುಗಿಯರ ಚಿಯರ್ಸ್, ಶಾಂಪೇನ್ ಓಪನ್ ಮಾಡಿಸಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.