ಸಿನಿವಾಣಿ

ನಾನು ಮದುವೆ ಆಗುತ್ತೇನೆ ಯಾವಾಗ ಅಂದರೆ... ಮತ್ತೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಪ್ರಭಾಸ್​!

ರಮೇಶ್​ ಕುಮಾರ್​​ ಬಿ ಎಡಮೋಳೆ

ಹೈದರಾಬಾದ್​: ತೆಲುಗು ಚಿತ್ರರಂಗದ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಅಂದರೆ ಅದು​ ಪ್ರಭಾಸ್​. ವಯಸ್ಸು 41 ವರ್ಷವಾದರೂ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಇತ್ತೀಚೆಗೆ ಅವರ ನಟನೆಯ ರಾಧೆಶ್ಯಾಮ್​ ಚಿತ್ರ ಬಿಡುಗಡೆಯಾಯಿತು. ಅಲ್ಲದೆ ಸಾಲು ಸಾಲು ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಸಿನಿಮಾಗಳಲ್ಲೇ ಮುಳುಗಿ ಹೋಗಿರುವ ಪ್ರಭಾಸ್​ ಮದುವೆಯನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳು ಪ್ರಭಾಸ್​ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಮದುವೆ ಕುರಿತು ಸ್ವತಃ ಪ್ರಭಾಸ್ ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ​ ಮಾತನಾಡಿದ್ದಾರೆ.

ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರವು ಥಿಯೇಟ್ರಿಕಲ್ ರಿಲೀಸ್ ಮತ್ತು ಪ್ರಿ-ರಿಲೀಸ್ ವ್ಯವಹಾರದಿಂದ 400 ಕೋಟಿ ರೂ. ಸಂಗ್ರಹಿಸಿದ್ದು, ಚಿತ್ರವು ಏಪ್ರಿಲ್ 24 ರಂದು ಮಧ್ಯಾಹ್ನ 12 ಗಂಟೆಗೆ ಜೀ ಸಿನಿಮಾದಲ್ಲಿ ಮೊದಲ ಪ್ರದರ್ಶನಕ್ಕೆ ಸಿದ್ಧವಾಗಿದೆ. ಪ್ರಭಾಸ್​ ಸದ್ಯ ತಮ್ಮ ಮುಂಬರುವ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಇಂಡಿಯಾ ಟುಡೆ ಜತೆ ಮಾತನಾಡಿರುವ ಪ್ರಭಾಸ್, ನಾನು ಎಲ್ಲಿಯೇ ಹೋದರು ಮದುವೆ ಯಾವಾಗ ಎಂದು ಕೇಳುತ್ತಾರೆ. ಇದರಿಂದ ನನಗೇನು ಮುಜುಗರವಿಲ್ಲ. ಏಕೆಂದರೆ, ಇದು ಅಭಿಮಾನಿಗ ಕಾಳಜಿ ಎಂದು ನಾನು ಭಾವಿಸುತ್ತೇನೆ. ಇದು ಸಾಕಷ್ಟು ಸಹಜ ಮತ್ತು ಸಾಮಾನ್ಯ ಪ್ರಶ್ನೆಯಾಗಿದೆ. ನಾನು ಅವರ ಸ್ಥಾನದಲ್ಲಿದ್ದರೆ, ನಾನು ಸಹ ಅದೇ ಕಾಳಜಿ ವಹಿಸುತ್ತಿದ್ದೆ ಎಂದಿದ್ದಾರೆ.

ಹಾಗಾದರೆ, ಶೀಘ್ರದಲ್ಲೇ ಮದುವೆ ಆಗಲು ಯೋಜಿಸುತ್ತಿದ್ದರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಭಾಸ್​, ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಸಿಕ್ಕಾಗ ಖಂಡಿತಾ ಘೋಷಣೆ ಮಾಡುತ್ತೇನೆ ಎಂದು ನಕ್ಕರು. ಈಗಲೂ ತಮ್ಮ ಮದುವೆ ಬಗ್ಗೆ ಪ್ರಭಾಸ್ ನೀಡಿರುವ ಹೇಳಿಕೆ​ ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದ್ದು, ಅವರ ಅಭಿಮಾನಿಗಳಿಗೆ ಕಾಯುವಿಕೆ ಮುಂದುವರಿದಿದೆ. (ಏಜೆನ್ಸೀಸ್​)