ಮುಂಬೈ: ದಿವಂಗತ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಬಾಲಿವುಡ್ನಲ್ಲೇ ಬಹುಬೇಡಿಕೆಯ ನಟಿಯಾಗಿದ್ದಾರೆ. ತಾಯಿಯಂತೆ ಜಾಹ್ನವಿ ಅವರಿಗೂ ವಿವಿಧ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಆಸೆ ಇದೆಯಂತೆ. ಈಗಾಗಲೇ ದಕ್ಷಿಣ ಭಾರತದ ಅನೇಕ ನಿರ್ದೇಶಕರು ಜಾಹ್ನವಿ ಅವರನ್ನು ಸಂಪರ್ಕಿಸಿದ್ದರೂ ಯಾವೊಂದು ಸಿನಿಮಾಗೂ ಸಹಿ ಮಾಡಿಲ್ಲ.
ಈವರೆಗೂ ದಕ್ಷಿಣ ಭಾರತದ ಸಿನಿಮಾಗಳಿಗೆ ಸಹಿ ಹಾಕದಿರುವುದಕ್ಕೆ ಕಾರಣ ಏನೆಂಬುದನ್ನು ಕೊನೆಗೂ ಮಾಧ್ಯಮ ಸಂದರ್ಶನದಲ್ಲಿ ಜಾಹ್ನವಿ ಹೊರಗಾಕಿದ್ದಾರೆ. ಅನೇಕ ನಿರ್ದೇಶಕರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ, ಯಾವೊಂದು ಚಿತ್ರವು ಕೂಡ ಓ ಮೈ ಗಾಡ್, ನಾನು ಇದನ್ನು ಮಾಡಲೇಬೇಕು ಅನಿಸುವಷ್ಟು ಇಷ್ಟವಾಗಲಿಲ್ಲ ಎಂದಿದ್ದಾರೆ.
ಆದಾಗ್ಯೂ, ನಾನು ದಕ್ಷಿಣ ಭಾರತ ಚಿತ್ರರಂಗದ ಬಹುದೊಡ್ಡ ಅಭಿಮಾನಿ ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ನೆಟ್ಫ್ಲಿಕ್ಸ್ ವಾಚ್ ಹಿಸ್ಟರಿಯಲ್ಲಿ ಮಲಯಾಳಂ ಚಿತ್ರಗಳೇ ತುಂಬಿಕೊಂಡಿವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮಲಯಾಳಂ ಚಿತ್ರಗಳನ್ನು ಅನ್ವೇಷಿಸಲು ಬಯಸುತ್ತೇನೆಂದು ಜಾಹ್ನವಿ ಹೇಳಿದ್ದಾರೆ. ಅಭಿಮಾನಿಗಳೂ ಕೂ ಜಾಹ್ನವಿ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವುದನ್ನು ಎದುರು ನೋಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಜಾಹ್ನವಿ ಪ್ರಸ್ತುತ ದೋಸ್ತಾನ 2 ಮತ್ತು ಗುಡ್ ಲಕ್ ಜೆರ್ರಿ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. (ಏಜೆನ್ಸೀಸ್)