ಸಿನಿವಾಣಿ

ಇನ್ನೆಂದು ಶಂಕರ್​ ಜತೆಯಲ್ಲಿ ಕೆಲಸ ಮಾಡುವುದಿಲ್ಲ: ಕಾಲಿವುಡ್​ ಕಾಮಿಡಿ ದಿಗ್ಗಜ ವಡಿವೇಲು ನಿರ್ಧಾರ

ಚೆನ್ನೈ: ಸುಮಾರು 4 ವರ್ಷಗಳ ಬಳಿಕ ತಮಿಳು ಚಿತ್ರರಂಗದ ಕಾಮಿಡಿ ದಿಗ್ಗಜ ವಡಿವೇಲು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಕೊನೆಯದಾಗಿ ನಟ ವಿಜಯ್​ ಅಭಿನಯದ ಮೆರ್ಸಲ್​ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ 2017ರಲ್ಲಿ ತೆರಕಂಡಿತ್ತು.

ಇಮ್ಸಾಯ್ ಅರಸನ್ 24 ಎಮ್ ಪುಲಿಕೇಶಿ ಚಿತ್ರದ ವಿವಾದದ ಬಳಿಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ 2018 ರಲ್ಲಿ ವಡಿವೇಲು ಅವರನ್ನು ಬ್ಯಾನ್​ ಮಾಡಿತ್ತು. ಚಿತ್ರದ ನಿರ್ಮಾಪಕ ಎಸ್​. ಶಂಕರ್ ಮತ್ತು ನಿರ್ದೇಶಕ ಚಿಂಬು ದೇವನ್ ಅವರು ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ವಡಿವೇಲು ವಿರುದ್ಧ ನಿರ್ಮಾಪಕರ ಮಂಡಳಿಗೆ ದೂರು ನೀಡಿದ್ದರು. ಹೀಗಾಗಿ ವಡಿವೇಲು ಅವರನ್ನು ಬ್ಯಾನ್​ ಮಾಡಲಾಗಿತ್ತು.

ಇದೀಗ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿರುವ ಲೈಕಾ ಪ್ರೊಡಕ್ಷನ್ಸ್ ವಡಿವೇಲು ಮತ್ತೆ ಬಣ್ಣ ಹಚ್ಚಲು ದಾರಿ ಮಾಡಿಕೊಟ್ಟಿದೆ. ಲೈಕಾ ಬ್ಯಾನರ್​ನಲ್ಲಿ ಮೂಡಿಬರಲಿರುವ ಮುಂದಿನ ಚಿತ್ರದಲ್ಲಿ ವಡಿವೇಲು ನಟಿಸಲಿದ್ದಾರೆ. ಇನ್ನು ಹೆಸರಿಡದ ಸಿನಿಮಾ ಕುರಿತು ನಡೆದ ಸಮಾರಂಭದಲ್ಲಿ ಮಾತನಾಡಿದ ವಡಿವೇಲು ಇನ್ನೆಂದು ಶಂಕರ್​ ಜತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ.

ಎಸ್​. ಶಂಕರ್​ ಖ್ಯಾತ ನಿರ್ದೇಶಕರೂ ಆಗಿದ್ದು, ಅವರೊಂದಿಗಿನ ಜಗಳ ಕಾರಣದಿಂದಾಗಿ ವಡಿವೇಲು ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ. (ಏಜೆನ್ಸೀಸ್​)