ಕೊಚ್ಚಿ: ನಟಿ ನಿತ್ಯಾ ಮೆನನ್ ಹೆಸರು ಹೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಮೂಲತಃ ಮಲಯಾಳಿ ಮೂಲದವರಾಗಿದ್ದರೂ ನಿತ್ಯಾ ಹುಟ್ಟಿದ್ದು, ಬೆಂಗಳೂರಿನಲ್ಲಿ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.
ಇತ್ತೀಚೆಗೆ ನಿತ್ಯಾ ಮೆನನ್ ಅವರ 19 (1)(ಎ) ಸಿನಿಮಾ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿದೆ. ಇದೀಗ ಧನುಷ್ ಅಭಿನಯದ ಥಿರುಚಿತ್ರಾಂಬಲಂ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಅವರ ಮದುವೆ ವಿಚಾರದಲ್ಲೂ ವದಂತಿ ಕೇಳಿಬಂದಿತ್ತು. ಆ ವಿಚಾರದ ಬಗ್ಗೆ ಸ್ವತಃ ನಿತ್ಯಾ ಅವರೇ ಸ್ಪಷ್ಟನೆ ನೀಡಿ, ಸದ್ಯಕ್ಕೆ ಮದುವೆ ಯೋಚನೆ ಇಲ್ಲ ಎಂದಿದ್ದರು. ಇದೀಗ ನಿತ್ಯಾ ಅವರು ನೋವಿನ ಸಂಗತಿಯೊಂದನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ.
ಮೊನ್ನೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ್ದ ನಿತ್ಯಾ, ಯುವಕನೋರ್ವ ಕಿರುಕುಳ ನೀಡುತ್ತಿದ್ದಾನೆ ಎಂದು ಆತನ ಹೆಸರೇಳದೆ ಆರೋಪಿಸಿದ್ದರು. ಆದರೆ, ಆತ ಯಾರು ಎಂಬುದು ಈಗಾಗಲೇ ಎಲ್ಲರಿಗು ತಿಳಿದಿದೆ. ಆತನ ಸಂತೋಷ್ ವಾರ್ಕಿ. ಈತ ಸಿನಿಮಾ ವಿಮರ್ಶಕ ಮತ್ತು ಯೂಟ್ಯೂಬರ್. ಈತ ಹೆಸರೇಳದೆ ನಿತ್ಯಾ ಸಾಲು ಸಾಲು ಆರೋಪ ಮಾಡಿದ್ದಾರೆ.
ಸಹಿಸಲಾಗದಷ್ಟು ಕಿರುಕುಳವನ್ನು ಎದುರಿಸಿದ್ದೇನೆ. ಬಹಳ ಸಮಯದಿಂದಲೂ ಆತ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಆತ ವೈರಲ್ ಆದ ಬಳಿಕ ಸಾರ್ವಜನಿಕವಾಗಿಯೇ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ. ಕಳೆದ 6 ವರ್ಷಗಳಿಂದ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದಾನೆ. ನನ್ನ ಪಾಲಕರನ್ನು ಹೆಸರನ್ನು ಉಲ್ಲೇಖಿಸುವ ಮೂಲಕ ಅವರಿಗೆ ಹಿಂಸೆ ಕೊಟ್ಟಿದ್ದಾರೆ. ತುಂಬಾ ಕ್ರೂರವಾಗಿ ಮಾತನಾಡುತ್ತಿದ್ದಾನೆ. ಈವರೆಗೂ ಆತನ 30ಕ್ಕೂ ಹೆಚ್ಚು ನಂಬರ್ಗಳನ್ನು ಬ್ಲಾಕ್ ಮಾಡಿದ್ದೇನೆ. ಅವನನ್ನು ನಂಬುವವರು ಮತ್ತು ಆತನ ಮಾತುಗಳನ್ನು ನಂಬುವವರು ನಿಜವಾಗಿಯೂ ಮೂರ್ಖರು. ಆತನ ವಿರುದ್ಧ ದೂರು ನೀಡುವಂತೆ ಅನೇಕರು ಹೇಳಿದರು. ಆದರೆ, ಬೇಡ ಎಂದು ಆತನನ್ನು ಕ್ಷಮಿಸಿದ್ದೇನೆ ಎಂದು ನಿತ್ಯಾ ಅಸಮಾಧಾನಾ ಹೊರಹಾಕಿದ್ದಾರೆ.
ನಿತ್ಯಾ ಹೇಳಿಕೆಗೆ ಸಂತೋಷ್ ಪ್ರತಿಕ್ರಿಯೆ
ನಿತ್ಯಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ವಾರ್ಕಿ, ನಾನು 30ಕ್ಕೂ ಹೆಚ್ಚು ನಂಬರ್ನಿಂದ ಕರೆ ಮಾಡಿ ಕಿರುಕುಳ ನೀಡಿರುವುದಾಗಿ ನಿತ್ಯಾ ಹೇಳಿದ್ದಾರೆ. ಆದರೆ, ಓರ್ವ ವ್ಯಕ್ತಿ ತನ್ನ ಹೆಸರಲ್ಲಿ ಎಷ್ಟು ಸಿಮ್ಗಳನ್ನು ತೆಗೆದುಕೊಳ್ಳಬಹುದು ಎಂದು ಜನರೇ ಯೋಚಿಸುತ್ತಾರೆ. ನಿತ್ಯಾ ಈಗಾಗಲೇ ಪ್ರೀತಿಯಲ್ಲಿ ಇರುವ ಬಗ್ಗೆ ಅವರ ತಾಯಿ ಹೇಳಿದ್ದಾರೆ. ಆದರೆ, ಆಕೆ ಯಾರೊಂದಿಗೂ ಎಂಗೇಜ್ ಆಗಿಲ್ಲ ಎಂದು ಅವರ ತಂದೆ ಹೇಳುತ್ತಾರೆ. ಅವರ ಮನೆಯಲ್ಲಿ ವಿಭಿನ್ನ ಅಭಿಪ್ರಾಯ ಇರುವುದನ್ನು ನೋಡಿ ನಾನು ಗೊಂದಲಕ್ಕೆ ಒಳಗಾದೆ. ನನ್ನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುತ್ತಾರೆ ಎಂಬುದು ನನಗೆ ತಿಳಿದಿದೆ. ನನ್ನ ತಂದೆ ಮರಣದ ನಂತರ ನಾನು ಯಾರ ತಂಟೆಗು ಹೋಗದೆ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಅವಳ ಬಗ್ಗೆ ಮೊದಲೇ ನನಗೆ ತಿಳಿದಿದ್ದರೆ, ನಾನು ಅವಳನ್ನು ಪ್ರೀತಿಸುತ್ತಿರಲಿಲ್ಲ ಮತ್ತು ಅವಳನ್ನು ಹಿಂಬಾಲಿಸುತ್ತಿರಲಿಲ್ಲ ಎಂದು ಸಂತೋಷ್ ಹೇಳಿದ್ದಾರೆ.
ಈ ಹಿಂದೆ ಒಮ್ಮೆ ಸಂತೋಷ್ ಭಾರಿ ಸುದ್ದಿಯಾಗಿದ್ದ. ಮದುವೆ ಆಗಲು ಅನುಮತಿ ಕೇಳಲು ನಿತ್ಯಾ ಮನೆಗೆ ಹೋಗಿದ್ದರು ಎಂದು ಸುದ್ದಿಯಾಗಿತ್ತು. ಮದುವೆ ಆಗುತ್ತೇನೆ ಅಂತಿದ್ದ ಸಂತೋಷ್ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಮಾಡಿ, ನಿತ್ಯಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಾನು ಇನ್ನೆಂದಿಗೂ ನಿತ್ಯಾ ಮೆನನ್ ಅವರನ್ನು ಮದುವೆ ಆಗುವುದಿಲ್ಲ. ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕೊಡಬಹುದಿತ್ತು ಎಂದು ಬರೆದುಕೊಂಡಿದ್ದ. ತನ್ನ ನಿಜವಾದ ಪ್ರೀತಿಯನ್ನು ಅರಿತುಕೊಳ್ಳದ ನಿತ್ಯಾ ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಡುತ್ತಾಳೆ. ಅವಳು ನನಗೆ ಅರ್ಹಳಲ್ಲ ಎಂದು ಪೋಸ್ಟ್ ಮೂಲಕ ನಿತ್ಯಾರನ್ನು ಸಂತೋಷ್ ಟೀಕಿಸಿದ್ದರು.
ಅಂದಹಾಗೆ ಸಂತೋಷ್ ವಾರ್ಕಿ ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಮುಖ. ಅವರು ಮೋಹನ್ಲಾಲ್ ಅಭಿಮಾನಿಯಾಗಿದ್ದು, ಆಗಾಗ ಅವರು ಸಿನಿಮಾಗಳ ಬಗ್ಗೆ ಕೊಡುವ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. (ಏಜೆನ್ಸೀಸ್)