ಸಿನಿವಾಣಿ

ಬದುಕಿನ ದೊಡ್ಡ ಬಲವನ್ನು ಕಳೆದುಕೊಂಡೆ: ಸಿನಿಮಾ ಯಶಸ್ಸಿನ ಖುಷಿಯ ಬೆನ್ನಲ್ಲೇ ನೇಹಾ ಶೆಟ್ಟಿ ಮನೆಯಲ್ಲಿ ದುರಂತ

ಹೈದರಾಬಾದ್​: ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮತ್ತೊಬ್ಬ ಕನ್ನಡತಿ ನೇಹಾ ಶೆಟ್ಟಿ ಅವರ ಮೊದಲ “ಡಿಜೆ ಟಿಲ್ಲು” ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ನೇಹಾ ನಟನೆಗೆ ಮತ್ತು ಗ್ಲಾಮರ್​ಗೆ ಸಿನಿ ವಿಮರ್ಶಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಚಿತ್ರದ ಯಶಸ್ಸಿನ ಖುಷಿಯಲ್ಲಿರುವಾಗಲೇ ನೇಹಾ ಶೆಟ್ಟಿಯವರ ಮನೆಯಲ್ಲಿ ದುರಂತ ಘಟನೆಯೊಂದು ನಡೆದಿದೆ.

ನೇಹಾ ಅವರನ್ನು ಚಿಕ್ಕಂದಿನಿಂದ ಸಾಕಿ ಸಲುಹಿದ್ದ ಅವರ ಅಜ್ಜಿ ನಿಧನರಾಗಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಅಜ್ಜಿಯ ಫೋಟೋ ಶೇರ್​ ಮಾಡಿಕೊಂಡಿದ್ದು, ನನಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದ ನನ್ನ ಬದುಕಿನ ದೊಡ್ಡ ಬಲವನ್ನು ಕಳೆದುಕೊಂಡಿದ್ದೇನೆ. ನನ್ನ ಅವ್ವ, ನಾನು 2 ವರ್ಷ ವಯಸ್ಸಿನವಳಾಗಿದ್ದಾಗಿನಿಂದ ನನ್ನ ಎಲ್ಲಾ ಪ್ರದರ್ಶನಗಳಿಗೂ ಯಾವಾಗಲೂ ಮುಂದಿನ ಸಾಲಿನ ಸೀಟನ್ನು ಹಿಡಿಯುತ್ತಿದ್ದವಳು. ಫೆ. 12 ನನ್ನ ಜೀವನದ ಅತ್ಯಂತ ದುಃಖಕರ ದಿನವಾಗಿದೆ. ನನ್ನ ಸಂತೋಷ ಮತ್ತು ಯಶಸ್ಸನ್ನು ಹಂಚಿಕೊಳ್ಳಲು ಆಕೆ ನನ್ನ ಜತೆಯಲ್ಲಿ ಇಲ್ಲ. ಆದರೆ, ಆಕೆಯ ಅನಿಯಮಿತ ಪ್ರೀತಿ ಮತ್ತು ಆಶೀರ್ವಾದ ಸದಾ ನನ್ನ ಮೇಲೆ ಇರುತ್ತದೆ ಎಂದು ಮುಂದೆ ಸಾಗುತ್ತೇನೆ. ಐ ಲವ್​ ಯು ಅವ್ವ ಡಿಜೆ ಟಿಲ್ಲು ಸಿನಿಮಾ ಯಶಸ್ಸನ್ನು ನಿನಗೆ ಅರ್ಪಿಸುತ್ತೇನೆಂದು ನೇಹಾ ಬರೆದುಕೊಂಡಿದ್ದಾರೆ.

ಡಿಜೆ ಟಿಲ್ಲು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ನೀಡಿ ಸಿನಿಮಾವನ್ನು ಬ್ಲಾಕ್​ಬಸ್ಟರ್ ಮಾಡಿದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ನೇಹಾ ಕೊನೆಯಲ್ಲಿ ತಿಳಿಸಿದ್ದಾರೆ.

ಡಿಜೆ ಟಿಲ್ಲು ಚಿತ್ರದಲ್ಲಿ ಸಿಧು ಜೊನ್ನಲಗಡ್ಡ ಅವರು ನಾಯಕರಾಗಿ ನಟಿಸಿದ್ದಾರೆ. ಸೂರ್ಯದೇವರ ನಾಗ ವಂಶಿ ಅವರು ಬಂಡವಾಳ ಹೂಡಿದ್ದಾರೆ. ಅಂದಹಾಗೆ ನೇಹಾ ಶೆಟ್ಟಿ ಕನ್ನಡದ ಮುಂಗಾರು ಮಳೆ 2 ಚಿತ್ರದಲ್ಲಿ ಗಣೇಶ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ, ಚಂದನ್​ ಶೆಟ್ಟಿ ಅವರ ಆಲ್ಬಮ್​ ಸಾಂಗ್​ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ. (ಏಜೆನ್ಸೀಸ್​)