

ಟ್ರೇಲರ್ ನೋಡಿ ಎಲ್ಲರೂ ಮೆಚ್ಚಿಕೊಂಡರು. ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇದನ್ನು ನೋಡಿ ತಂಡದವರು ಖುಷಿಯಾದರು. ಅಲ್ಲಿಗೆ "ಗಿಲ್ಕಿ' ಚಿತ್ರತಂಡದ ಟ್ರೇಲರ್ ಬಿಡುಗಡೆ ಸಮಾರಂಭದ ಒಂದು ಹಂತ ಮುಗಿದಿತ್ತು. ಇನ್ನೊಂದು ಹಂತ ಬಾಕಿ ಇತ್ತು. ಅದು ಚಿತ್ರತಂಡದವರ ಮಾತು . ಮೊದಲು ನಿರ್ದೇಶಕ ವೈಕೆ ಮಾತನಾಡಿದರು.
"ಈ ಚಿತ್ರ ಗಿಲ್ಕಿ, ನ್ಯಾನ್ಸಿ ಹಾಗೂ ಷೇಕ್ಸ್ಪಿಯರ್ ಎಂಬ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ಇಲ್ಲಿ ನಾಯಕನ ಹೆಸರು ಗಿಲ್ಕಿ. ಅವನು ಬುದ್ಧಿಮಾಂದ್ಯನಾದರೆ, ನಾಯಕಿ ಅಂಗವಿಕಲೆ. ಅವರಿಬ್ಬರ ನಡುವೆ ನಡೆಯುವ ಪ್ರೇಮಕಥೆ ಇದು. ಕಂಟೆಂಟ್ ಇರುವ ಸಿನಿಮಾ ಇದು. ಕಮಷಿರ್ಯಲ್ ಆಗಿ ನಿರೂಪಿಸುವ ಪ್ರಯತ್ನ ಮಾಡಿದ್ದೇವೆ. ಇದೇ 18ರಂದು ಚಿತ್ರ ಬಿಡುಗಡೆಯಾಗುತ್ತಿದೆ' ಎಂದರು.
ನರಸಿಂಹ ಕುಲಕರ್ಣಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ನಾಯಕನಾಗಿ ತಾರಕ್ ಪೊನ್ನಪ್ಪ ಇದ್ದರೆ, ನಾಯಕಿಯಾಗಿ ಚೈತ್ರಾ ಆಚಾರ್ಯ ನಟಿಸಿದ್ದಾರೆ. ಈ ಪೈಕಿ ಚೈತ್ರಾ ಕಥೆ ಕೇಳುತ್ತಲೇ ಮುಳುಗಿ ಹೋದರಂತೆ. ಈ ಪಾತ್ರವನ್ನು ತಾವೇ ನಿರ್ವಹಿಸಬೇಕೆಂದು ನಿರ್ಧರಿಸಿದರಂತೆ. "ಈ ಚಿತ್ರದ ಹಾಡು ಮತ್ತು ಟ್ರೇಲರ್ ನೋಡಿ ಒಳ್ಳೆಯ ಮಾತಾಡುತ್ತಿದ್ದಾರೆ. ನನಗೆ ಈ ಚಿತ್ರದಿಂದ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ' ಎನ್ನುತ್ತಾರೆ.
ಚಿತ್ರದ ಇನ್ನೊಂದು ಪ್ರಮುಖ ಪಾತ್ರವನ್ನು ಮೈಸೂರಿನ ಗೌತಮ್ ರಾಜ್ ನಿರ್ವಹಿಸಿದ್ದಾರೆ. ಆದಿಲ್ ನದಾಫ್ ಸಂಗೀತ ಸಂಯೋಜಿಸಿದರೆ, ಬಿ.ಎಸ್. ಕೆಂಪರಾಜು ಸಂಕಲನ ಮಾಡಿದ್ದಾರೆ. "ರಾಮ ರಾಮಾ ರೇ' ಮತ್ತು "ಒಂದಲ್ಲ ಎರಡಲ್ಲ' ನಿರ್ದೇಶಕ ಡಿ. ಸತ್ಯಪ್ರಕಾಶ್ ಈ ಚಿತ್ರವನ್ನು ತಮ್ಮ ಸತ್ಯ ಪಿಕ್ಚರ್ಸ್ ಮೂಲಕ ವಿತರಿಸುತ್ತಿದ್ದಾರೆ.