ಸಿನಿವಾಣಿ

‘ಜೇಮ್ಸ್’ ಚಿತ್ರದ ಒಂದೂ ದೃಶ್ಯ ಕೂಡಾ ಕಟ್ ಮಾಡಬೇಕಿಲ್ಲ!

ಬೆಂಗಳೂರು: ಇಡೀ ಕರುನಾಡ ಜನತೆ ಮಾರ್ಚ್ 17ಕ್ಕೆ ಕಾಯುತ್ತಿದ್ದಾರೆ. ಅದರಲ್ಲಿಯೂ ನಟ ಪುನೀತ್ ರಾಜ್​ಕುಮಾರ್ ಕಟ್ಟಾಭಿಮಾನಿಗಳು ಆ ದಿನದ ಆಗಮನಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಎಂದರೇ ತಪ್ಪಾಗುವುದಿಲ್ಲ. ಹೌದು, ಕರುನಾಡ ರಾಜಕುಮಾರ ನಟ ಪುನೀತ್​ ರಾಜ್​ಕುಮಾರ್ ಅವರು ನಿಧನಕ್ಕೆ ಮುನ್ನಾ ಕೊನೆಯ ಬಾರಿಗೆ ‘ಜೇಮ್ಸ್’ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಗಳು ಇವೆ. ಹೌದು, ಹೀರೋ ಆಗಿ ನಟ ಪುನೀತ್ ಅವರ ಕೊನೆಯ ಸಿನಿಮಾ ‘ಜೇಮ್ಸ್’.
ಈಗಾಗಲೇ ಈ ಚಿತ್ರದ ಹಲವು ಪೋಸ್ಟ್​ರ್​ಗಳು, ಟೀಸರ್ ಹಾಗೂ ಸಿನಿಮಾದ ಒಂದು ಹಾಡು ರಿಲೀಸ್ ಆಗಿದ್ದು, ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಅಪ್ಪು ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮಾರ್ಚ್​ 17 ರಂದು ‘ಜೇಮ್ಸ್’ ತೆರೆಗಪ್ಪಳಿಸಲಿದೆ. ಹಾಗಾಗಿ, ಈ ಚಿತ್ರದ ಪ್ರತಿ ಒಂದು ಮಾಹಿತಿ ಅಥವಾ ಅಪ್​ಡೇಟ್ ಗೋಸ್ಕರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಇದೀಗ ಒಂದು ಸಿಹಿ ಸುದ್ದಿ. ಅಂದಹಾಗೆ, ‘ಜೇಮ್ಸ್’ ಚಿತ್ರದ ಸೆನ್ಸಾರ್​ ಪ್ರಕ್ರಿಯೆಯನ್ನು ಮುಗಿಸಿದ್ದು, ಸಿನಿಮಾದ ದೃಶ್ಯಗಳಲ್ಲಿ ಒಂದೂ ಕಟ್ ಕೂಡಾ ಇಲ್ಲದೆ, U/A ಪ್ರಮಾಣಪತ್ರ ಪಡೆದಿದ್ದು, ವಿಶ್ವದಾದ್ಯಂತ ಅಬ್ಬರಿಸಲು ರೆಡಿಯಾಗಿದ್ದಾರೆ ಅಪ್ಪು.
ಈ ವಿಚಾರ ಕೇಳಿದ ಅಪ್ಪು ಅವರ ಕಟ್ಟಾಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ನಿರ್ದೇಶಕ ಚೇತನ್​ ಕುಮಾರ್ ಅವರು ‘ಜೇಮ್ಸ್​’ ಸಿನಿಮಾವನ್ನು ಸೆನ್ಸಾರ್ ಮಂಡಳಿ ಎದುರು ಇರಿಸಿದ್ದು, ‘ಜೇಮ್ಸ್’ಗೆ ಯು/ಎ ಪ್ರಮಾಣಪತ್ರ ನೀಡಲಾಗಿದೆ. ಇದರ ಜತೆಗೆ, ಸಿನಿಮಾದಲ್ಲಿ ಯಾವುದೇ ದೃಶ್ಯವನ್ನು ಕಟ್​ ಮಾಡಲು ಸೆನ್ಸಾರ್ ಮಂಡಳಿ ಸೂಚನೆ ನೀಡಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಹಾಗಾಗಿ, ಮಾರ್ಚ್​ 17ರಂದು ಅಪ್ಪು ಅವರನ್ನು ಕೊನೆಯ ಬಾರಿ ಹೀರೋ ಆಗಿ ಬೆಳ್ಳಿ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.