ಮೈಸೂರು: ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಇನ್ನೂ ಮಾಸಿಲ್ಲ. ಅಪ್ಪು ನಮನ್ನು ಅಗಲಿ ನಾಲ್ಕು ತಿಂಗಳು ಆಗಿವೆ ಎಂಬುದೇ ಅಬಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಎಂದಿಗೂ ಅಂತ್ಯವಿಲ್ಲದ ನೋವಿನ ನಡುವೆಯೇ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಮಾ. 17 ರಂದು ಆಚರಿಸಿ, ನಟನ ಕೊನೆಯ ಸಿನಿಮಾ 'ಜೇಮ್ಸ್' ಜಾತ್ರೆಯಲ್ಲಿ ಸಂಭ್ರಮಿಸುತ್ತಿದ್ದರು. ಇಂತಹ ಸಮಯದಲ್ಲಿ, ಅಪ್ಪು ಅಭಿಮಾನಿಯೊಬ್ಬರು ಕುಸಿದು ಬಿದ್ದಿದ್ದು, ಪುನೀತ್ ಅವರಂತೆಯೇ ಅವರು ಹೃದಯಾಘಾತದಿಂದಲೇ ಸಾಯುವಂತಾಗಿದೆ. ಸದ್ಯ, ಈ ಘಟನೆಯಿಂದ ಎಲ್ಲರೂ ವಿಧಿಯನ್ನು ದೂರುವಂತೆ ಮಾಡಿದೆ.
ಅಂದಹಾಗೆ, ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಇದೆ. 'ಜೇಮ್ಸ್' ಜಾತ್ರೆಯ ಅಂಗವಾಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 22 ವರ್ಷದ ಅಪ್ಪು ಅಭಿಮಾನಿ ಆಕಾಶ್ ಕೂಡಾ ಭಾಗವಹಿಸಿದ್ದರು. ಆದರೆ, ಸಂಭ್ರಮಾಚರಣೆಯ ವೇಳೆ ಆಕಾಶ್ ಕುಸಿದು ಬಿದ್ದ ಬಳಿಕ ಕೂಡಲೇ ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಇಂದು ಬೆಳಿಗ್ಗೆ ಅಪ್ಪು ಅಭಿಮಾನಿ ಆಕಾಶ್ ನಿಧನರಾಗಿರುವುದು ಎಲ್ಲರಿಗೂ ತೀವ್ರ ನೋವುಂಟು ಮಾಡಿದ್ದು, ಆಕಾಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.