ತಿರುವನಂತಪುರಂ: ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ಗೆ ಕರೊನಾ ಪಾಸಿಟಿವ್. ಹಾಗಂತ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಕ್ವಾರಂಟೈನ್ನಲ್ಲಿರುವ ಅವರು, ಆದಷ್ಟು ಬೇಗ ಗುಣಮುಖರಾಗಿ ಹೊರಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎನ್ಸಿಬಿ ವಿರುದ್ಧವೇ ಕೇಸ್ ದಾಖಲಿಸಿದ ಸುಶಾಂತ್ ಆಪ್ತ!
ಕರೊನಾ ಕೇಸ್ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಮಾರ್ಚ್ನಲ್ಲಿ ಲಾಕ್ಡೌನ್ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಪೃಥ್ವಿರಾಜ್, ಜೋರ್ಡಾನ್ನ ವಾಡಿರಮ್ ಮರಳುಗಾಡಿನಲ್ಲಿ 'ಆಡುಜೀವಿತಂ' ಎಂಬ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಫ್ಲೈಟ್ಗಳ ಓಡಾಟಕ್ಕೆ ನಿರ್ಬಂಧ ಹೇರಿದ ಕಾರಣ, ಅವರು ಸುಮಾರು ಎರಡು ತಿಂಗಳುಗಳ ಕಾಲ ಅಲ್ಲೇ ಉಳಿಯಬೇಕಾಯಿತು.
ಜೂನ್-ಜುಲೈ ಹೊತ್ತಿಗೆ ಲಾಕ್ಡೌನ್ ಸ್ವಲ್ಪ ಸಡಿಲಗೊಂಡು ಅಂತಾರಾಷ್ಟ್ರೀಯ ಫ್ಲೈಟುಗಳ ಓಡಾಟ ಪ್ರಾರಂಭವಾದ ಮೇಲೆ, ಪೃಥ್ವಿರಾಜ್ ಮತ್ತು ತಂಡ ಕೇರಳಕ್ಕೆ ವಾಪಸ್ಸಾಯಿತು. 14 ದಿನಗಳ ಕ್ವಾರಂಟೈನ್ ಮುಗಿಸಿಯೇ ಪೃಥ್ವಿರಾಜ್ ಮನೆಗೆ ವಾಪಸ್ಸಾಗಿದ್ದರು. ಆಗ ಟೆಸ್ಟ್ ಮಾಡಿಸಿದಾಗಲೂ ಅವರಿಗೆ ನೆಗೆಟಿವ್ ಬಂದಿತ್ತು. ಈಗ ಅವರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಅದು ಹೇಗೆ ಸಾಧ್ಯವಾಯಿತು ಎಂದರೆ, ಅದಕ್ಕೆ ಕಾರಣ 'ಜನ ಗಣ ಮನ' ಎಂದು ಹೇಳಲಾಗುತ್ತಿದೆ. ಪೃಥ್ವಿರಾಜ್ ಇತ್ತೀಚಿನ ದಿನಗಳಲ್ಲಿ 'ಜನ ಗಣ ಮನ' ಎಂಬ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಚಿತ್ರೀಕರಣ ಮಾಡಲಾಗುತ್ತಿತ್ತಂತೆ. ಆದರೆ, ಚಿತ್ರೀಕರಣ ಮುಗಿಯುತ್ತಾ ಬಂದ ಹಾಗೆ, ಚಿತ್ರತಂಡದ ನಾಲ್ಕೈದು ಜನರಲ್ಲಿ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಕೊನೆಗೆ ಟೆಸ್ಟ್ ಮಾಡಿಸಿದಾಗ ಪೃಥ್ವಿರಾಜ್ಗೂ ಕರೊನಾ ಇರುವುದು ಗೊತ್ತಾಗಿದೆ.
ಇದೀಗ ಪೃಥ್ವಿರಾಜ್ ಮತ್ತೆ ಕ್ವಾರಂಟೈನ್ನಲ್ಲಿದ್ದಾರೆ. ಅಷ್ಟೇ ಅಲ್ಲ, ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಮತ್ತು ತಮ್ಮ ಜತೆಗಿದ್ದ ಮಂದಿಗೆ ಕ್ವಾರಂಟೈನ್ ಮಾಡಿಕೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅವರು ವಾಪಸ್ಸಾಗಿ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.