ಸಿನಿವಾಣಿ

ಐದು ವರ್ಷಗಳ ನಂತರ ಬಾಲಿವುಡ್​ಗೆ ಪೃಥ್ವಿರಾಜ್​; ಕಾಜೋಲ್​ ಜತೆಗೆ ನಟನೆ

ಮುಂಬೈ: ಮಲಯಾಳಂನ ಸ್ಟಾರ್​ ನಟ ಪೃಥ್ವಿರಾಜ್​ ಸುಕುಮಾರನ್​ಗೆ ಬಾಲಿವುಡ್​ ಹೊಸದೇನಲ್ಲ. ಈ ಹಿಂದೆಯೇ ಅವರು 'ಅಯ್ಯಾ', 'ಔರಂಗಜೇಬ್​' ಮತ್ತು 'ನಾಮ್​ ಶಬಾನಾ' ಚಿತ್ರಗಳಲ್ಲಿ ನಟಿಸಿದ್ದರು. ಈಗ ಬರೋಬ್ಬರಿ ಐದು ವರ್ಷಗಳ ನಂತರ ಪೃಥ್ವಿರಾಜ್​, ಹಿಂದಿ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ಕರಣ್​ ಜೋಹರ್​ ಹಿಂದಿಯಲ್ಲಿ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ ಅಲಿ ಖಾನ್​ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಮತ್ತು ಕಾಜೋಲ್​ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಸಿಕೊಳ್ಳುತ್ತಿರುವ ಸುದ್ದಿ ಇದೆ.

ಈ ಚಿತ್ರವನ್ನು ಕೇಯೋಜ್​ ಇರಾನಿ ನಿರ್ದೇಶನ ಮಾಡುತ್ತಿದ್ದಾರೆ. ಅವರು ಹೇಳಿಕೊಂಡಂತೆ ಈ ಚಿತ್ರವು ಮೂರು ಪ್ರಮುಖ ಪಾತ್ರಗಳತ್ತ ಸುತ್ತುತ್ತದೆ ಮತ್ತು ಈ ಚಿತ್ರದಲ್ಲಿ ಪೃಥ್ವಿರಾಜ್​ ಮತ್ತು ಕಾಜೋಲ್​ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನು, ಇಬ್ರಾಹಿಂ ಪಾತ್ರ ಏನು? ಈ ವಿಷಯವನ್ನು ಸದ್ಯ ರಹಸ್ಯವಾಗಿಡಲಾಗಿದೆ.

ಇನ್ನೂ ಹೆಸರಿಡದ ಈ ಚಿತ್ರ ಜನವರಿಯಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಡಿಸೆಂಬರ್​ನಲ್ಲಿ ಮೂವರಿಗೂ ಕಾರ್ಯಾಗಾರ ನಡೆಯಲಿದೆಯಂತೆ.

ಇದಲ್ಲದೆ, 'ಸಲಾರ್​' ಚಿತ್ರದಲ್ಲಿ ಪೃಥ್ವಿರಾಜ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ 'ಗೋಲ್ಡ್​', 'ಖಲೀಫಾ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.